ಅಸ್ಸಾಂ ಬೆನ್ನಲ್ಲೇ ಕೇರಳದಲ್ಲೂ ಮತ್ತೆ ಪ್ರವಾಹ ಭೀತಿ, 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್!

ಅಸ್ಸಾಂ ಬೆನ್ನಲ್ಲೇ ದೇವರ ನಾಡು ಕೇರಳದಲ್ಲೂ ಮತ್ತೆ ಪ್ರವಾಹ ಭೀತಿ ಎದುರಾಗಿದ್ದು, ಭಾರಿ ಮಳೆಗೆ ನದಿಗಳು ತುಂಬಿ ಹರಿಯುತ್ತಿದ್ದು, 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಚ್ಚಿ: ಅಸ್ಸಾಂ ಬೆನ್ನಲ್ಲೇ ದೇವರ ನಾಡು ಕೇರಳದಲ್ಲೂ ಮತ್ತೆ ಪ್ರವಾಹ ಭೀತಿ ಎದುರಾಗಿದ್ದು, ಭಾರಿ ಮಳೆಗೆ ನದಿಗಳು ತುಂಬಿ ಹರಿಯುತ್ತಿದ್ದು, 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಈ ಬಗ್ಗೆ ದಕ್ಷಿಣ ಭಾರತದ ಹವಾಮಾನ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ನೈಋತ್ಯ ಮಾನ್ಸೂನ್ ಮಳೆ ವ್ಯಾಪಕವಾಗಿದೆ ಎಂದು ಹೇಳಿದ್ದಾರೆ. ಪರಿಣಾಮ ಕೇರಳದಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಪ್ರಮುಖವಾಗಿ ಕೇರಳದ ಇಡುಕ್ಕಿ, ಪಥನಂತಿಟ್ಟ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಇಡುಕ್ಕಿ, ಪಥನಂತಿಟ್ಟ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಜುಲೈ 18 ರಿಂದ ಮಳೆ ವ್ಯಾಪಕವಾಗಿದ್ದು, ಜುಲೈ 20ರವರೆಗೂ ಭಾರಿ ಮಳೆ ಮುಂದುವರೆಯಲಿದೆ. ಈ ಮೂರು ಜಿಲ್ಲೆಗಳು ಮಾತ್ರವಲ್ಲದೇ ಎರ್ನಾಕುಲಂ ನಲ್ಲೂ ಮಳೆಯ ಪ್ರಮಾಣ ಜೋರಾಗಿದ್ದು, ಇಲ್ಲೂ ಕೂಡ ರೆಡ್ ಅಲರ್ಟ್ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಸ್ತುತ ರೆಡ್ ಅಲರ್ಟ್ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಇಡುಕ್ಕಿ, ಪಥನಂತಿಟ್ಟ, ಎರ್ನಾಕುಲಂ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿನ ತಗ್ಗು ಪ್ರದೇಶ ಮತ್ತು ನದಿ ತೀರದಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಈಗಾಗಲೇ ಈ ಭಾಗದಲ್ಲಿ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದು, ಸುರಕ್ಷಿತ ಪ್ರದೇಶಗಳಿಗೆ ರವಾನೆಯಾಗುವಂತೆ ಸೂಚನೆ ನೀಡಿದ್ದಾರೆ. ಈ ನಾಲ್ಕು ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಬರೊಬ್ಬರಿ 20 ಸೆ.ಮೀ ಮಳೆಯಾಗುತ್ತಿದ್ದು, ಇಲ್ಲಿನ ಜಲಾಶಯಗಳಲ್ಲಿನ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಮೀನುಗಾರರು ನದಿಗೆ ಮತ್ತು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com