ಚಂದ್ರಯಾನ-2 ಯಶಸ್ವಿ ಉಡಾವಣೆ: ನೆಹರು ಸ್ಮರಿಸಲು ಇದು ಸಕಾಲ ಎಂದ ಕಾಂಗ್ರೆಸ್, ಬಿಜೆಪಿ ತಿರುಗೇಟು

ಭಾರತದ ಬಾಹ್ಯಾಕಾಶ ಲೋಕದ ಮಹಾತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಯಶಸ್ವಿ ಉಡಾವಣೆಯ ಕೀರ್ತಿ ತನ್ನದಾಗಿಸಿಕೊಳ್ಳಲು ಯತ್ನಿಸಿದ ಕಾಂಗ್ರೆಸ್....

Published: 22nd July 2019 12:00 PM  |   Last Updated: 22nd July 2019 08:44 AM   |  A+A-


Chandrayaan-2 launch: Congress says 'good time' to remember Nehru, BJP hits back

ಚಂದ್ರಯಾನ-2 ಯಶಸ್ವಿ ಉಡಾವಣೆ

Posted By : LSB LSB
Source : UNI
ನವದೆಹಲಿ: ಭಾರತದ ಬಾಹ್ಯಾಕಾಶ ಲೋಕದ ಮಹಾತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಯಶಸ್ವಿ ಉಡಾವಣೆಯ ಕೀರ್ತಿ ತನ್ನದಾಗಿಸಿಕೊಳ್ಳಲು ಯತ್ನಿಸಿದ ಕಾಂಗ್ರೆಸ್, ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ನೀಡಿರುವ ಕೊಡುಗೆಯನ್ನು ಸ್ಮರಿಸಿದೆ.

ಚಂದ್ರಯಾನ-2 ಯಶಸ್ವಿ ಉಡಾವಣೆಗೆ ಕಾಂಗ್ರೆಸ್ ಇಸ್ರೋ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯನ್ನು ಅಭಿನಂದಿಸಿದ್ದು, ಈ ಕಾರ್ಯಾಚರಣೆಗೆ ಡಾ. ಮನಮನೋಹನ್ ಸಿಂಗ್ ಪ್ರಧಾನಿಯಾಗಿದ್ದ ಯುಪಿಎ 2ರ ಅವಧಿಯಲ್ಲಿ ಸಮ್ಮತಿ ಸೂಚಿಸಲಾಗಿತ್ತು ಎಂದು ಹೇಳಿಕೆ ನೀಡಿದೆ.

ಭಾರತದ ಎರಡನೇ ಮೂನ್ ಮಿಷನ್ ಉಡಾವಣೆ ನಂತರ ಟ್ವೀಟ್ ಮಾಡಿರುವ ಕಾಂಗ್ರೆಸ್, “ಚಂದ್ರಯಾನ-2ರ ಯಶಸ್ವಿ ಉಡಾವಣೆಗಾಗಿ ಇಸ್ರೋ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆಗಳು” ಎಂದು ಹೇಳಿದೆ.

ಇದೇ ಸಂದರ್ಭದಲ್ಲಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹ ಎನಿಸಿರುವ ಡಾ ವಿಕ್ರಮ್ ಸಾರಾಭಾಯ್ ಅವರೊಂದಿಗೆ ನೆಹರು ಇರುವ ಭಾವಚಿತ್ರವನ್ನು ಶೇರ್ ಮಾಡಿದ್ದು, ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಧಾನಿಗಳ ಕೊಡುಗೆಯನ್ನು ಉಲ್ಲೇಖಿಸಿದೆ.

“ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು 1962ರಲ್ಲಿ ಇನ್ಕೊಸ್ಪಾರ್ ಮೂಲಕ ಬಾಹ್ಯಾಕಾಶ ಸಂಶೋಧನೆಗಾಗಿ ಅನುದಾನ ಬಿಡುಗಡೆಗೊಳಿಸಿದರು.  ಇದೇ ಇನ್ಕೊಸ್ಪಾರ್ ಮುಂದೆ ಇಸ್ರೋ ಬಾಹ್ಯಾಕಾಶ ಸಂಸ್ಥೆಯೆಂಬ ಹೆಸರು ಪಡೆಯಿತು. ಡಾ ಮನಮೋಹನ್ ಸಿಂಗ್ ಅವರು 2008ರಲ್ಲಿ ಚಂದ್ರಯಾನ-2 ಯೋಜನೆಗೆ ಮಂಜೂರು ಮಾಡಿದ್ದರು. ಕಾಂಗ್ರೆಸ್ ಪಕ್ಷದ ಈ ಇಬ್ಬರು ಪ್ರಧಾನಿಗಳ ಕೊಡುಗೆ ಸ್ಮರಿಸಲು ಇದು ಸಕಾಲ” ಎಂದು ತಿಳಿಸಿದೆ.

ಆದಾಗ್ಯೂ, ಚಂದ್ರಯಾನ-1ಕ್ಕೆ 2003ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ್ದರು ಎಂಬ ವಿಷಯವನ್ನು ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ ಉಲ್ಲೇಖಿಸಿಲ್ಲ.

ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಎಐಸಿಸಿ ಸಂವಹನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ , “ಚಂದ್ರ ಭಾರತಕ್ಕಾಗಿ ಕಾಯುತ್ತಿದೆ.  11 ವರ್ಷಗಳ ಹಿಂದೆ ‘ಚಂದ್ರಯಾನ-1’ರ ನಂತರ ‘ಚಂದ್ರಯಾನ-2’ ರ ಉಡಾವಣೆ ಯಶಸ್ವಿಯಾಗಿದ್ದು, ಪಯಣ ಆರಂಭವಾಗಿದೆ. ಈ ಸಾಧನೆಗಾಗಿ ಹಗಲಿರುಳು ಶ್ರಮಿಸಿರುವ ಇಸ್ರೋ 130 ಕೋಟಿ ನಾಗರಿಕರ ಹೆಮ್ಮೆಗೆ ಕಾರಣವಾಗಿದೆ” ಎಂದು ಹೇಳಿದ್ದರು.

ಕಾಂಗ್ರೆಸ್ ಟ್ವೀಟ್ ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಪ್ರತಿಪಕ್ಷ ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ  ಬಾಹ್ಯಾಕಾಶ ಯೋಜನೆಗಳಲ್ಲೂ ರಾಜಕೀಯ ಮಾಡುತ್ತಿದೆ ಎಂದು ತಿರುಗೇಟು ನೀಡಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp