ಆರ್ ಟಿಐ ಮಸೂದೆಗೆ ಕಾಂಗ್ರೆಸ್ ವಿರೋಧ; ಹಿಂಪಡೆಯುವಂತೆ ಒತ್ತಾಯ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆರ್ ಟಿಐ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಪತ್ರವೊಂದನ್ನು ಬರೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆರ್ ಟಿಐ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಪತ್ರವೊಂದನ್ನು ಬರೆದಿದ್ದಾರೆ.
ಪತ್ರದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಆರ್ ಟಿಐ ಕಾಯ್ದೆ ಸಂಪೂರ್ಣ ನಿರುಪಯೋಗಿಯಾಗಿದ್ದು, ಕೇಂದ್ರ ಸರ್ಕಾರ ಮಾಹಿತಿ ಹಕ್ಕು ಆಯೋಗದ ಆಸ್ತಿತ್ವ ಮತ್ತು ಸ್ವಾತಂತ್ರ್ಯವನ್ನು ಹರಣ ಮಾಡುವ ಯತ್ನಕ್ಕೆ ಕೈ ಹಾಕಿದೆ. ಕೇಂದ್ರ ಸರ್ಕಾರದ ಈ ಕ್ರಮ ಮಾಹಿತಿ ಹಕ್ಕು ಆಯೋಗ ಮತ್ತು ಕೇಂದ್ರ ವಿಚಕ್ಷಣಾ ಆಯೋಗದ ನಡುವಿನ ಸಂಬಂಧವನ್ನು ಕಡಿದು ಹಾಕಲಿದೆ ಎಂದು ಸೋನಿಯಾ ಕಿಡಿಕಾರಿದ್ದಾರೆ. 
ಅಂತೆಯೇ ಕೇಂದ್ರ ಸರ್ಕಾರ ತನಗಿರುವ ಬಲಾಬಲದಿಂದ ಮಸೂದೆಯನ್ನು ಪಾಸ್ ಮಾಡಿಕೊಳ್ಳಬಹುದು. ಆದರೆ ತನ್ನ ಈ ಕೃತ್ಯದಿಂದ ದೇಶದ ಪ್ರತೀಯೊಬ್ಬ ಪ್ರಜೆಯನ್ನೂ ಅಸಮರ್ಥನನ್ನಾಗಿ ಮಾಡುತ್ತದೆ ಎಂದೂ ಸೋನಿಯಾ ಗಾಂಧಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಲೋಕಸಭೆಯಲ್ಲಿ ಸೋಮವಾರ ಕಾಂಗ್ರೆಸ್ ಸದಸ್ಯರಿಂದ ಮಾಹಿತಿ ಹಕ್ಕು ಅಧಿನಿಯಮದ ಮಸೂದೆಗೆ(ಆರ್ ಟಿಐ) ಭಾರಿ ವಿರೋಧ ವ್ಯಕ್ತವಾಯಿತು. ಹಿರಿಯ ಸದಸ್ಯ ಶಶಿ ತರೂರ್ ಅವರು, ಅದನ್ನು 'ಆರ್ ಟಿ ಐ ನಿವಾರಣಾ ಮಸೂದೆ' ಎಂದು ಬಣ್ಣಿಸಿದರಲ್ಲದೆ, ಮಸೂದೆಗಳನ್ನು ಚರ್ಚಿಸದೆ, ಪರಿಶೀಲಿಸದೆ ಅನುಮೋದಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿದರು.
ರಾಜ್ಯ ಹಾಗೂ ಕೇಂದ್ರ ಮಾಹಿತಿ ಆಯುಕ್ತರ ಸೇವಾವಧಿ ಹಾಗೂ ವೇತನಗಳನ್ನು ನಿಗದಿಪಡಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಮಾಹಿತಿ ಹಕ್ಕು ಅಧಿನಿಯಮ (ತಿದ್ದುಪಡಿ) ಮಸೂದೆ 2019 ಅನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಲಾಯಿತು. ಮಸೂದೆ ಮಂಡಿಸಿದ ಕೇಂದ್ರ ಸಿಬ್ಬಂದಿ, ವೈಯಕ್ತಿಕ ದೂರು ಪರಿಹಾರ ಹಾಗೂ ಪಿಂಚಣಿಗಳ ಇಲಾಖೆಯ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್, ಈ ಮಸೂದೆ ಕಾಯ್ದೆಯ ನಿಯಮಗಳನ್ನು ವ್ಯವಸ್ಥಿತಗೊಳಿಸಿ, ಆರ್ ಟಿ ಐ ರೂಪುರೇಷೆಗಳನ್ನು ಸದೃಢಗೊಳಿಸಲಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಪಾರದರ್ಶಕತೆಯಿಂದೆ ಕೆಲಸ ಮಾಡುತ್ತಿದೆ. ಮಸೂದೆಯ ಮೂಲ ರೂಪುರೇಷೆ ಹಾಗೂ ಜನರ ಪಾಲ್ಗೊಳ್ಳುವಿಕೆಯ ಅವಕಾಶವನ್ನು ಬದಲಿಸಲಾಗಿಲ್ಲ ಎಂದರು.
ಆರ್ ಟಿಐ ಕಾಯ್ದೆಯ ತಿದ್ದುಪಡಿಯಿಂದ ಕಾಯ್ದೆ ದುರ್ಬಲವಾಗಿಲ್ಲ. ಈ ಸಂಬಂಧ ಸಂಸದರ ಆರೋಪ ಆಧಾರರಹಿತ. ಮಸೂದೆಯ ಸ್ವಾಯತ್ತತೆಯ ಭಾಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸಮರ್ಥನೆ ನೀಡಿದರು. ಮಸೂದೆ ಅನುಸಾರ, ಕೇಂದ್ರ ಚುನಾವಣಾ ಆಯೋಗ ಹಾಗೂ ಕೇಂದ್ರ, ರಾಜ್ಯ ಮಾಹಿತಿ ಆಯೋಗಗಳ ಕಾರ್ಯವೈಖರಿ ಸಂಪೂರ್ಣ ಭಿನ್ನವಾಗಿದೆ. ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆಯಾಗಿದೆ. ಇನ್ನೊಂದೆಡೆ, ಕೇಂದ್ರ ಮತ್ತು ರಾಜ್ಯ ಈ ಮಸೂದೆಯನ್ನು ವಿರೋಧಿಸಿದ ಶಶಿ ತರೂರ್, ಸರ್ಕಾರ ಮಸೂದೆಗಳ ಅನುಮೋದನೆಗೆ ತರಾತುರಿ ತೋರುತ್ತಿದೆ. ಆದರೆ, ಸಂಸದೀಯ ಸ್ಥಾಯಿ ಸಮಿತಿಗಳ ರಚನೆಗೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಮಾಹಿತಿ ಆಯೋಗದ ಆಯುಕ್ತರು, ಪ್ರಧಾನಿಯ ಶೈಕ್ಷಣಿಕ ಮಾಹಿತಿ ನೀಡುವಂತೆ ಪ್ರಧಾನ ಮಂತ್ರಿಗಳ ಕಚೇರಿಗೆ ಸೂಚಿಸಿದ್ದರಿಂದ ಈ ತಿದ್ದುಪಡಿ ತರಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ಮಸೂದೆಯ ತಿದ್ದುಪಡಿ ಕುರಿತು ಸಾರ್ವಜನಿಕ ಆಕ್ಷೇಪಣೆಗಳನ್ನು ಆಹ್ವಾನಿಸದೆ ಮಸೂದೆ ಮಂಡನೆಗೆ ಸರ್ಕಾರ ಮುಂದಾಗಿರುವುದು ಸಂಸತ್ತಿನ ನಿಂದನೆ . ಮಸೂದೆಯನ್ನು ಪರಿಶೀಲಿಸಬೇಕಾದ ಸಂಸದೀಯ ಸಮಿತಿಗಳನ್ನು ರಚಿಸದೆ ಸರ್ಕಾರ ಮಸೂದೆ ಮಂಡನೆಗೆ ಮಂದಾಗಿದೆ ಎಂದು ಆಕ್ಷೇಪಿಸಿದರು. ದೇಶದ ಆರ್ ಟಿಐ ನಿಯಮಗಳಿಗೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಈಗ ಸರ್ಕಾರ ಅದನ್ನು ದುರ್ಬಲಗೊಳಿಸಲು ಮುಂದಾಗಿದೆ. ಈ ಮಸೂದೆಯನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com