ತೆಲಂಗಾಣ: ಹುಟ್ಟೂರಿನ 2 ಸಾವಿರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಘೋಷಿಸಿದ ಕೆಸಿಆರ್

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತಮ್ಮ ಹುಟ್ಟೂರಾದ ಚಿಂತಾಮಡಕ ಗ್ರಾಮದಲ್ಲಿ ವಾಸಿಸುತ್ತಿರುವ 2 ಸಾವಿರ ಕುಟುಂಬಕ್ಕೆ...
ಕೆ ಚಂದ್ರಶೇಖರ್ ರಾವ್
ಕೆ ಚಂದ್ರಶೇಖರ್ ರಾವ್
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತಮ್ಮ ಹುಟ್ಟೂರಾದ ಚಿಂತಾಮಡಕ ಗ್ರಾಮದಲ್ಲಿ ವಾಸಿಸುತ್ತಿರುವ 2 ಸಾವಿರ ಕುಟುಂಬಕ್ಕೆ ಸರ್ಕಾರದ ವತಿಯಿಂದ ತಲಾ 10 ಲಕ್ಷ ರೂಪಾಯಿ ಬ್ಯಾಂಕ್ ಖಾತೆಗೆ ಹಾಕುವುದಾಗಿ ಘೋಷಿಸಿದ್ದಾರೆ.
ಸಿದ್ದಿಪೇಟ್ ಜಿಲ್ಲೆಯ ಚಿಂತಾಮಡಕದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಸಿಆರ್, ಈ ಗ್ರಾಮದಲ್ಲಿ ಜನ್ಮ ಪಡೆದಿರುವ ನಾನು, ಈ ಗ್ರಾಮದಲ್ಲಿ ವಾಸವಿರುವ 2 ಸಾವಿರ ಕುಟುಂಬಸ್ಥರ ಖಾತೆಗೆ ಸರ್ಕಾರದ ವತಿಯಿಂದ ತಲಾ 10 ಲಕ್ಷ ರೂಪಾಯಿ ನೀಡಲು ಉದ್ದೇಶಿಸಿದ್ದೇನೆ. ಈ ಹಣವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸರ್ಕಾರ ನೀಡುವ 10 ಲಕ್ಷ ರೂಪಾಯಿ ಹಣದಲ್ಲಿ ಟ್ರಾಕ್ಟರ್, ಹೊಲ ಸೇರಿದಂತೆ ನೀವು ಏನು ಬೇಕಾದರೂ ಖರೀದಿಸಿ ಎಂದು ಸಿಎಂ ಹೇಳಿದರು.
ಕೆ.ಚಂದ್ರಶೇಖರ್ ರಾವ್ ಅವರ ಈ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 200 ಕೋಟಿಯಷ್ಟು ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದ್ದು, ಇದಕ್ಕೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕೇವಲ ಮುಖ್ಯಮಂತ್ರಿ ಸ್ವಗ್ರಾಮದ ಜನರಿಗೆ ಅನುಕೂಲ ಮಾಡಿಕೊಟ್ಟರೆ ಸಾಕೇ?, ಈ ಯೋಜನೆ ಪ್ರಾಂತ್ಯದ ಎಲ್ಲ ಜನರಿಗೆ ಸಿಗುವಂತಾಗಬೇಕು. ರಾಜ್ಯದ ಎಲ್ಲ ಜನರಿಗೂ ಅನುಕೂಲವಾಗುವಂತೆ ಯೋಜನೆಗಳನ್ನು ಘೋಷಿಸಬೇಕು ಎಂದು ಬಿಜೆಪಿ ಮುಖಂಡ ಪಿ ಮುರಳೀಧರ್ ರಾವ್ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com