ಕೋಲ್ಕತಾ ಆಸ್ಪತ್ರೆಯಲ್ಲಿ ಹೈಡ್ರಾಮಾ: ನವಜಾತ ಶಿಶುವಿಗೆ ನಾನೇ ಅಪ್ಪ ಎಂದ ಮೂವರು!

ಕೋಲ್ಕತಾ ಆಸ್ಪತ್ರೆಯೊಂದರಲ್ಲಿ ಭಾರಿ ಹೈಡ್ರಾಮಾ ನಡೆದಿದ್ದು, ಮಗುವಿಗೆ ಜನ್ಮ ನೀಡಿದ ಮಹಿಳೆಯ ನಿಜವಾದ ಪತಿ ಯಾರು? ಆ ಮಗುವಿನ ನಿಜವಾದ ತಂದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೋಲ್ಕತಾ: ಕೋಲ್ಕತಾ ಆಸ್ಪತ್ರೆಯೊಂದರಲ್ಲಿ ಭಾರಿ ಹೈಡ್ರಾಮಾ ನಡೆದಿದ್ದು, ಮಗುವಿಗೆ ಜನ್ಮ ನೀಡಿದ ಮಹಿಳೆಯ ನಿಜವಾದ ಪತಿ ಯಾರು? ಆ ಮಗುವಿನ ನಿಜವಾದ ತಂದೆ ಯಾರು? ಎಂಬ ಪ್ರಶ್ನೆಗಳು ಆಸ್ಪತ್ರೆಯ ಸಿಬ್ಬಂದಿಯನ್ನು ಕಾಡುತ್ತಿವೆ.
ದಕ್ಷಿಣ ಕೋಲ್ಕತಾದಲ್ಲಿರುವ ಐರಿಸ್ ಆಸ್ಪತ್ರೆಯಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಕಳೆದ ಶನಿವಾರ 21 ವರ್ಷದ ಮಹಿಳೆ ಹೆರಿಗಾಗಿ ತನ್ನ ತಾಯಿ ಹಾಗೂ ಓರ್ವ ವ್ಯಕ್ತಿಯೊಂದಿಗೆ ಆಗಮಿಸಿ ಆಸ್ಪತ್ರೆಗೆ ದಾಖಲಾಗಿದ್ದರು.  ಈ ವೇಳೆ ಅರ್ಜಿ ತುಂಬುವಾಗ ಮಹಿಳೆ ಜೊತೆ ಬಂದಿದ್ದ ವ್ಯಕ್ತಿ ಆಕೆಯ ಪತಿ ಹಾಗೂ ಹುಟ್ಟುವ ಮಗುವಿನ ತಂದೆ ಎಂದು ಬರೆದು, ಚಿಕಿತ್ಸೆಯ ಅಡ್ವಾನ್ಸ್ ಹಣವನ್ನು ಕಟ್ಟಿದ್ದರು.
ಸೋಮವಾರ ಬೆಳಗ್ಗೆ ಮಹಿಳೆಯ ತಪಾಸಣೆ ಮಾಡಲು ವೈದ್ಯರು ಆಕೆಯನ್ನು ವಾರ್ಡಿನಿಂದ ಕರೆದುಕೊಂಡು ಹೋಗಿದ್ದರು. ಈ ವೇಳೆ ಇನ್ನೋರ್ವ ವ್ಯಕ್ತಿ ನಾನು ಮಹಿಳೆಯ ಪತಿ ಹಾಗೂ ಆಕೆಯ ಹೊಟ್ಟೆಯಲ್ಲಿರುವುದು ನನ್ನ ಮಗುವೆಂದು ಆಸ್ಪತ್ರೆಗೆ ಬಂದು, ಮಹಿಳೆಯನ್ನು ಭೇಟಿಯಾಗಬೇಕು ಎಂದಿದ್ದನು. ಆಗ ಮೊದಲು ಪತಿಯೆಂದು ಬಂದ ವ್ಯಕ್ತಿಗೂ ಈತನ ನಡುವೆ ಜಗಳ ನಡೆದಾಗ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅವರ ಜಗಳ ಬಿಡಿಸಿ ಮಗುವಿನ ನಿಜವಾದ ತಂದೆ ಯಾರೆಂದು ಪತ್ತೆ ಮಾಡುವುದಾಗಿ ತಿಳಿಸಿ, ಇಬ್ಬರನ್ನು ವಿಚಾರಣೆ ನಡೆಸಿದಾಗಲೂ ಕೂಡ ಆ ಇಬ್ಬರು ವ್ಯಕ್ತಿಗಳು ನಾನೇ ಮಗುವಿನ ತಂದೆ. ಆಕೆ ನನ್ನ ಪತ್ನಿ ಎಂದೇ ಹೇಳಿದ್ದಾರೆ.
ನಂತರ ಆ ಇಬ್ಬರಿಗೂ ಮದುವೆ ಪ್ರಮಾಣಪತ್ರ ನೀಡುವಂತೆ ಸೂಚಿಸಿದ್ದಾರೆ. ಎರಡನೇ ವ್ಯಕ್ತಿ ಮದುವೆ ಪ್ರಮಾಣಪತ್ರದೊಂದಿಗೆ ವಾಪಸ್ ಆಗಿದ್ದಾರೆ. ಬಳಿಕ ಮೊದಲನೆ ವ್ಯಕ್ತಿ ತಾನು ಮಹಿಳೆಗೆ ಸ್ನೇಹಿತ ಮಾತ್ರ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಮಹಿಳೆಯ ತಾಯಿ ಮ್ಯಾರೆಜ್ ಸರ್ಟಿಫಿಕೇಟ್ ತಂದ ವ್ಯಕ್ತಿ ತನ್ನ ಅಳಿಯನಲ್ಲ ಎಂದು ಹೇಳಿದಾಗ ಪೊಲೀಸರ ತಲೆಗೆ ಹುಳ ಬಿಟ್ಟಂತಾಯ್ತು.
ಈ ನಡುವೆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆಗ ಪೊಲೀಸರು ಇನ್ನು ಈ ವ್ಯಕ್ತಿಗಳನ್ನು ವಿಚಾರಣೆ ನಡೆಸಿದರೆ ಪ್ರಯೋಜನವಿಲ್ಲ. ಮಹಿಳೆಯೇ ಹೇಳಿಕೆ ಪಡೆದು ಸಮಸ್ಯೆಗೆ ಅಂತ್ಯ ಹಾಡಲು ನಿರ್ಧರಿಸಿದರು. ಆದ್ರೆ ಸೋಮವಾರ ಸಂಜೆ ಇನ್ನೊಂದು ಸಮಸ್ಯೆ ಪೊಲೀಸರಿಗೆ ತಲೆನೋವಾಗಿ ಬಂದಿದೆ. ಮೂರನೇ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದು, ನಾನು ಮಹಿಳೆಯ ಪತಿಯಲ್ಲ, ಆದ್ರೆ ಆಕೆಗೆ ಜನಿಸಿರುವುದು ನನ್ನ ಮಗು ಎಂದಾಗ ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸರು ದಂಗಾಗಿ ಹೋಗಿದ್ದಾರೆ.
ಆಸ್ಪತ್ರೆಯ ಇತಿಹಾಸದಲ್ಲೇ ಇಂತಹ ಘಟನೆ ಹಿಂದೆಂದೂ ನಡೆದಿಲ್ಲ. ಹೀಗೆ ಮೂವರು ವ್ಯಕ್ತಿ ಬಂದು ಆಸ್ಪತ್ರೆಗೆ ದಾಖಲಿರುವುದು ನನ್ನ ಪತ್ನಿ, ಆಕೆ ಜನ್ಮ ನೀಡಿರುವುದು ನನ್ನ ಮಗು ಎಂದು ಹೇಳಿ, ಆಸ್ಪತ್ರೆ ಆವರಣದಲ್ಲಿ ಗಲಾಟೆ ನಡೆಸಿರಲಿಲ್ಲ. ಹೀಗಾಗಿ ಈ ಗಲಾಟೆ ನಡೆದ ಬಳಿಕ ಮಹಿಳೆಯನ್ನು ಭೇಟಿ ಮಾಡುವಂತಿಲ್ಲ ಎಂದು ನಿರ್ಬಂಧ ಹೇರಿದ್ದೇವು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com