ಕೆಲವು ಗೊಂದಲಗಳಿಂದ ಸರ್ಕಾರ ರಚನೆಗೆ ವಿಳಂಬ, ಕೇಂದ್ರದ ಮಾರ್ಗದರ್ಶನ ಪಡೆಯುತ್ತೇವೆ: ಬಿಜೆಪಿ ನಿಯೋಗ

ಕಾಂಗ್ರೆಸ್ ಮತ್ತು ಜೆಡಿಎಸ್ ನ ಅತೃಪ್ತ ಶಾಸಕರ ರಾಜೀನಾಮೆ ಕುರಿತು ಈವರೆಗೆ ಸ್ಪೀಕರ್ ರಮೇಶ್ ಕುಮಾರ್ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಇರುವುದು ...
ಅರವಿಂದ ಲಿಂಬಾವಳಿ, ಜೆಸಿ ಮಾಧುಸ್ವಾಮಿ
ಅರವಿಂದ ಲಿಂಬಾವಳಿ, ಜೆಸಿ ಮಾಧುಸ್ವಾಮಿ
ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ನ ಅತೃಪ್ತ ಶಾಸಕರ ರಾಜೀನಾಮೆ ಕುರಿತು ಈವರೆಗೆ ಸ್ಪೀಕರ್ ರಮೇಶ್ ಕುಮಾರ್ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಇರುವುದು ಹಲವಾರು ಗೊಂದಲಗಳಿಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಬಿಜೆಪಿ ಸರ್ಕಾರ ರಚನೆ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕ ಶಾಸಕ ಜೆಸಿ ಮಾಧುಸ್ವಾಮಿ ಹೇಳಿದ್ದಾರೆ. 
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಕುರಿತು ರಾಜ್ಯದ ಬಿಜೆಪಿ ನಾಯಕರ ನಿಯೋಗ ದೆಹಲಿಗೆ ಆಗಮಿಸಿದ್ದು ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾಧುಸ್ವಾಮಿ ಮಾತನಾಡಿದರು. ಮೈತ್ರಿ ಸರ್ಕಾರ ವಿಶ್ವಾಸ ಕಳೆದುಕೊಂಡು ಪತನವಾಗಿದೆ. ಬಿಜೆಪಿ ಸರ್ಕಾರ ರಚನೆ ಮಾಡಬೇಕಿದೆ.ಈ ಹಿನ್ನೆಲೆ ಹೈಕಮಾಂಡ್ ಭೇಟಿಗೆ ಬಂದಿದ್ದೇವೆ. ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿನ ಬೆಳವಣಿಗೆ ಕುರಿತು ವಿವರಿಸಲಿದ್ದೇವೆ. ಶಾಸಕರ ರಾಜೀನಾಮೆ ಸಂಬಂಧ ಪಕ್ಷದ ಹೈಕಮಾಂಡ್​ಗೆ ಸಾಕಷ್ಟು ಗೊಂದಲಗಳಿವೆ ಎಂದರು. 
ತಮ್ಮ ಬೇಡಿಕೆ ಮತ್ತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅತೃಪ್ತ ಶಾಸಕರು 14 ತಿಂಗಳು ಕಾದು ನೋಡಿದರು. ಅವರ ಮನವಿ ಮತ್ತು ಬೇಡಿಕೆಗಳನ್ನು ಪರಿಗಣಿಸಲು ಅಧಿಕಾರದಲ್ಲಿದ್ದ ಮೈತ್ರಿ ಸರ್ಕಾರದ ನಾಯಕರು ಪ್ರಯತ್ನ ಮಾಡಲಿಲ್ಲ, ಇದರಿಂದ ಆಡಳಿತ ವೈಖರಿಗೆ ಬೇಸತ್ತು ಅತೃಪ್ತ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಮತ್ತೆ ವಾಪಸ್ ಅವರ ಪಕ್ಷಕ್ಕೆ ಹಿಂದಿರುಗುವ ಸಾಧ್ಯತೆಗಳಿಲ್ಲ, ಮೈತ್ರಿ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಅಲ್ಲದೆ ಬಿಎಸ್​ಪಿ ಪಕ್ಷ ತನ್ನ ಏಕೈಕ ಶಾಸಕರಾದ ಎನ್. ಮಹೇಶ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದು ಸಹ ಭವಿಷ್ಯದಲ್ಲಿ ಬಿಜೆಪಿ ಸ್ವಂತ ಸರ್ಕಾರ ರಚಿಸುವಲ್ಲಿ ಸಹಕಾರಿಯಾಗಲಿದೆ. ನಾವು ಹೊಸ ಸರ್ಕಾರ ರಚಿಸುವಲ್ಲಿ ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿ, ಅಲ್ಲಿ ಏನು ನಡೆಯುತ್ತಿದೆ, ಏನಾಗುತ್ತಿದೆ ಎಂದು ನಮ್ಮ ರಾಷ್ಟ್ರಾಧ್ಯಕ್ಷರ ಜೊತೆ ಚರ್ಚೆ ಮಾಡಲು ಇಲ್ಲಿಗೆ ಬಂದಿದ್ದೇವೆ ಎಂದಿದ್ದಾರೆ. 
ಶಾಸಕ ಅರವಿಂದ ಲಿಂಬಾವಳಿ, ಕರ್ನಾಟಕದಲ್ಲಿನ ಪರಿಸ್ಥಿತಿ ನಿಮಗೆ ಗೊತ್ತಿದೆ. ಹೊಸ ಸರ್ಕಾರ ರಚನೆಯಾಗಬೇಕು. ಅದಕ್ಕೆ ಹೇಗೆ ಮುಂದುವರಿಯಬೇಕೆಂದು ನಾಯಕರ ಸಲಹೆ ಕೇಳಲು ಬಂದಿದ್ದೇವೆ ಎಂದರು.
ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲದ ಕಾರಣ ಅದಕ್ಕಾಗಿ ಕಾಯುತ್ತಿದ್ದೀರಾ ಎಂದು ಕೇಳಿದಾಗ ಅರವಿಂದ ಲಿಂಬಾವಳಿ, ಅದು ಮುಖ್ಯ ವಿಷಯವಲ್ಲ, ಬಹುಶಃ ಅದು ಕೂಡ ಒಂದು ಕಾರಣ ಇರಬಹುದು. ಸರ್ಕಾರ ರಚನೆಗೆ ಕೇಂದ್ರದ ಹಿರಿಯ ನಾಯಕರ ಮಾರ್ಗದರ್ಶನ ನಮಗೆ ಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com