ಧಾರಾಕಾರ ಮಳೆ; ಮುಂಬೈ-ಕೊಲ್ಹಾಪುರ ಮಧ್ಯೆ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ಸ್ಥಗಿತ, ನೂರಾರು ಪ್ರಯಾಣಿಕರ ರಕ್ಷಣೆ

ಅವ್ಯಾಹತ ಮಳೆಯಿಂದಾಗಿ ಹಳಿಗಳ ಮೇಲೆ ನೀರು ತುಂಬಿಕೊಂಡು ಮುಂಬೈ-ಕೋಲ್ಹಾಪುರ ಮಹಾಲಕ್ಷ್ಮಿ ...
ಧಾರಾಕಾರ ಮಳೆಗೆ ನೀರು ತುಂಬಿಕೊಂಡಿರುವುದು
ಧಾರಾಕಾರ ಮಳೆಗೆ ನೀರು ತುಂಬಿಕೊಂಡಿರುವುದು
ಮುಂಬೈ: ಅವ್ಯಾಹತ ಮಳೆಯಿಂದಾಗಿ ಹಳಿಗಳ ಮೇಲೆ ನೀರು ತುಂಬಿಕೊಂಡು ಮುಂಬೈ-ಕೋಲ್ಹಾಪುರ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲು ಚಲಿಸಲು ಸಾಧ್ಯವಾಗದೆ ಬದ್ಲಾಪುರ್ ಮತ್ತು ವಾಂಘಾನಿ ಸಿಲುಕಿ ಹಾಕಿಕೊಂಡಿದ್ದು ಸುಮಾರು 450ಕ್ಕೂ ಅಧಿಕ ಪ್ರಯಾಣಿಕರು ರೈಲಿನಲ್ಲಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ರಯಾಣಿಕರ ರಕ್ಷಣೆಗೆ ರೈಲ್ವೆ ರಕ್ಷಣಾ ಪಡೆ ಮತ್ತು ಮುಂಬೈ ಪೊಲೀಸರು ಮತ್ತು ಎನ್ ಡಿಆರ್ ಎಫ್ ಪಡೆ ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಇಂದು ಬೆಳಗ್ಗೆ 3 ಗಂಟೆಯಿಂದ ಮುಂಬೈಯಿಂದ 100 ಕಿಲೋ ಮೀಟರ್ ದೂರದಲ್ಲಿ ರೈಲು ಭಾರೀ ಮಳೆಗೆ ಸಿಕ್ಕಿಹಾಕಿಕೊಂಡಿದೆ. ಪ್ರಯಾಣಿಕರನ್ನು ವಿಮಾನದಲ್ಲಿ ಏರ್ ಲಿಫ್ಟ್ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಂತೆ ಮಹಾರಾಷ್ಟ್ರ ಸರ್ಕಾರ ರಕ್ಷಣಾ ಇಲಾಖೆ ಅಧಿಕಾರಿಗಳನ್ನು ಮನವಿ ಮಾಡಿಕೊಂಡಿದೆ.  

ರೈಲು ಸಿಕ್ಕಿಹಾಕಿಕೊಂಡಿರುವ ಸ್ಥಳಕ್ಕೆ ಮೂರು ದೋಣಿಗಳನ್ನು ಕಳುಹಿಸಲಾಗಿದೆ ಎಂದು ಮಹಾರಾಷ್ಟ್ರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಹಾ ನಿರ್ದೇಶಕ ಬ್ರಿಜೇಶ್ ಸಿಂಗ್ ತಿಳಿಸಿದ್ದಾರೆ.

ಮುಂಬೈ ನಗರ ಹಾಗೂ ಸುತ್ತಮುತ್ತ ನಿನ್ನೆಯಿಂದ ಧಾರಾಕಾರ ಮಳೆಯಾಗುತ್ತಿದ್ದು ಹಲವು ಕಡೆಗಳಲ್ಲಿ ನೀರು ನಿಂತು ಸಂಚಾರ ಸ್ಥಗಿತಗೊಂಡಿದೆ. ವಾಹನ, ಸಂಚಾರ ದಟ್ಟಣೆ ಉಂಟಾಗಿದೆ. ಸಿಯಾನ್, ಚೆಂಬೂರ್, ಗಾಂಧಿ ಮಾರುಕಟ್ಟೆಗಳಲ್ಲಿ ನೀರು ನಿಂತು ಭಾರೀ ಸಂಚಾರ ದಟ್ಟಣೆಯುಂಟಾಗಿದೆ. 

ಧಾರಾಕಾರ ಮಳೆಯಿಂದಾಗಿ ವಾಯುಮಾರ್ಗ ಸಂಚಾರದಲ್ಲಿ ಕೂಡ ಅಡಚಣೆಯುಂಟಾಗಿದೆ. ಏಳು ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದ್ದು, 8ರಿಂದ 9 ವಿಮಾನಗಳ ಹಾರಾಟ ಮಾರ್ಗವನ್ನು ಬದಲಾಯಿಸಲಾಗಿದೆ.

ಇಂದು ಬೆಳಗ್ಗೆ 8.15ರ ಹೊತ್ತಿಗೆ ವಿಮಾನ ಸಂಚಾರ ಸಹಜ ಸ್ಥಿತಿಗೆ ಬಂದಿದೆ ಎಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ. ಜುಲೈ 29ರವರೆಗೆ ಮುಂಬೈ ಸುತ್ತಮುತ್ತ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com