ಕಾಶ್ಮೀರದಲ್ಲಿ ದ್ವೇಷವನ್ನು ಹರಡಲು ಯತ್ನಿಸುವವರು ಎಂದಿಗೂ ಯಶಸ್ವಿಯಾಗುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯನ್ನುಂಟು ಮಾಡುವವರು ದ್ವೇಷ ಹರಡಲು...
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ
ನವದೆಹಲಿ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯನ್ನುಂಟು ಮಾಡುವವರು ದ್ವೇಷ ಹರಡಲು ಪ್ರಯತ್ನಿಸುವವರು ಯಾವತ್ತೂ ಯಶಸ್ವಿಯಾಗುವುದಿಲ್ಲ. ಬಂದೂಕು, ಬಾಂಬ್, ಗುಂಡಿನ ಶಬ್ದಗಳಿಗಿಂತ ಸರ್ಕಾರದ ಅಭಿವೃದ್ಧಿ ಕೆಲಸಗಳು ಹೆಚ್ಚು ಶಕ್ತಿಯುತವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. 
ತಮ್ಮ ಜನಪ್ರಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆಸಿದ ಮತ್ತೆ ಗ್ರಾಮಕ್ಕೆ ಕಾರ್ಯಕ್ರಮದಲ್ಲಿ ಕುಗ್ರಾಮಗಳ ಜನರು, ಯುವಕ, ಯುವತಿಯರು ಉತ್ಸಾಹದಿಂದ ಭಾಗವಹಿಸಿದ್ದು ನೋಡಿದರೆ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಜನರು ಸ್ಪಂದಿಸುತ್ತಾರೆ ಎಂದು ಗೊತ್ತಾಗುತ್ತದೆ. ಕಾಶ್ಮೀರದ ಸಣ್ಣ ಸಣ್ಣ ಹಳ್ಳಿಗಳಿಗೆ ಸರ್ಕಾರಿ ಅಧಿಕಾರಿಗಳು ಸರ್ಕಾರದ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಲು ಹೋಗಿದ್ದರು.
ಅಭಿವೃದ್ಧಿಯ ಮುಖ್ಯವಾಹಿನಿಗೆ ಬರಲು ಕಾಶ್ಮೀರ ಜನತೆ ಎಷ್ಟು ಉತ್ಸುಕವಾಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಅವರಿಗೆ ಉತ್ತಮ ಆಡಳಿತ ಬೇಕು ಎಂಬ ಮನೋಧರ್ಮವನ್ನು ತೋರಿಸುತ್ತದೆ. ಸರ್ಕಾರದ ಹಿರಿಯ ಅಧಿಕಾರಿಗಳು 4,500 ಪಂಚಾಯತ್ ಗಳ ಗ್ರಾಮಸ್ಥರ ಮನೆಬಾಗಿಲಿಗೆ ಹೋಗಿದ್ದಾರೆ. ಕಾಶ್ಮೀರದ ಗಡಿ ಭಾಗದಲ್ಲಿ ನಿತ್ಯವೂ ಭಯದಿಂದ ಬದುಕುತ್ತಿರುವ ಗ್ರಾಮಗಳಿಗೆ ಸಹ ಅಧಿಕಾರಿಗಳು ಹೋಗಿದ್ದಾರೆ ಎಂದು ಮೋದಿ ಹೇಳಿದರು.
ಜುಲೈ 1ರಿಂದ ಸುಮಾರು 3 ಲಕ್ಷಕ್ಕೂ ಅಧಿಕ ಯಾತ್ರಿಕರು ಅಮರನಾಥ ಯಾತ್ರೆಯನ್ನು ಮುಗಿಸಿದ್ದಾರೆ. ಇದರಿಂದ ರಾಜ್ಯದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಿದೆ. ಅದೇ ರೀತಿ ಉತ್ತರಾಖಂಡದ ಚಾರ್ ದಾಮ್ ಯಾತ್ರೆ, ಕೇದಾರನಾಥ ಯಾತ್ರೆಗೆ ಸಹ ಯಾತ್ರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. 
ತಮ್ಮ 25 ನಿಮಿಷಗಳ ಭಾಷಣದಲ್ಲಿ ಪ್ರಧಾನಿ, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥವತ್ತಾಗಿ ವಿಶೇಷ ಸಿದ್ದತೆಯೊಂದಿಗೆ ಆಚರಿಸಬೇಕೆಂದು ಕರೆ ನೀಡಿದರು. ಆಗಸ್ಟ್ 15ನ್ನು ಜನತೆಯ ಉತ್ಸವವಾಗಿ ಜನಪರ ಉತ್ಸವವಾಗಿ ಆಚರಿಸುವಂತೆ ಮೋದಿ ಕರೆ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com