ತಾಯಿ ಮಗನಿಗೆ ಕಿಸ್ ಮಾಡಿದ್ರೆ ಅದು ಸೆಕ್ಸಾ? ಮಾಂಝಿ

ಸಮಾಜವಾದಿ ಪಕ್ಷದ ಅಜಂಖಾನ್ ಸಂಸತ್ತಿನಲ್ಲಿ ಬಿಜೆಪಿ ಸಂಸದೆ ರಮಾದೇವಿ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರುವಂತೆ ಬಿಹಾರ ಮಾಜಿ ಮುಖ್ಯಮಂತ್ರಿ ಜಿತಿನ್ ರಾಮ್ ಮಾಂಝಿ ಅಜಂಖಾನ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
Manjhi
Manjhi
ಪಾಟ್ನಾ: ಸಮಾಜವಾದಿ ಪಕ್ಷದ ಅಜಂಖಾನ್ ಸಂಸತ್ತಿನಲ್ಲಿ   ಬಿಜೆಪಿ ಸಂಸದೆ ರಮಾದೇವಿ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರುವಂತೆ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದೂಸ್ತಾನಿ ಅವಾಮಿ ಮೋರ್ಚಾ ನಾಯಕ ಜಿತಿನ್ ರಾಮ್ ಮಾಂಝಿ ಅಜಂಖಾನ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
'ಸಹೋದರ ಹಾಗೂ ಸಹೋದರಿ ಭೇಟಿಯಾಗಿ ಮುತ್ತಿಟ್ಟಾಗ ಅದನ್ನು ಸೆಕ್ಸ್ ಎನ್ನಲು ಸಾಧ್ಯವೇ' ?ಎಂದು ಪ್ರಶ್ನಿಸಿದ್ದಾರೆ. ತಾಯಿ ತನ್ನ ಮಗನಿಗೆ , ಮಗ ತನ್ನ ತಾಯಿಗೆ ಮುತ್ತಿಟ್ಟಾಗ ಅದನ್ನು ಸೆಕ್ಸ್ ? ಎನ್ನಬಹುದೇ ಎಂದು ಅವರು ಪ್ರಶ್ನಿಸಿದ್ದು, ಬಾಯಿ ತಪ್ಪಿ ಅಜಂಖಾನ್ ಆ ರೀತಿಯ ಹೇಳಿಕೆ ನೀಡಿದ್ದಾರೆ. ಅಜಂಖಾನ್ ಕ್ಷಮೆ ಕೋರಲಿ ಆದರೆ, ರಾಜೀನಾಮೆ ನೀಡಬಾರದು ಎಂದು ಮಾಂಝಿ ಎಎನ್ ಐ ಸುದ್ದಿಸಂಸ್ಥೆಗೆ  ಹೇಳಿದ್ದಾರೆ.
ಗುರುವಾರ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮೇಲಿನ ಚರ್ಚೆ ನಡೆಯುತ್ತಿರುವಾಗ ಸ್ಪೀಕರ್ ಅನುಪಸ್ಥಿತಿಯಲ್ಲಿ ಸದನ ನಡೆಸುತ್ತಿದ್ದ ಬಿಜೆಪಿ ಹಿರಿಯ ಸಂಸದೆ ರಮಾದೇವಿ ಕುರಿತು ಅಜಂಖಾನ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ನಿಮ್ಮನ್ನು ಕಣ್ಣಲ್ಲಿ ಕಣ್ಣೀಟ್ಟು ನೋಡಬೇಕೆಂಬ ಬಯಕೆ ಉಂಟಾಗುತ್ತಿದೆ ಎಂಬ ಹೇಳಿಕೆ ಬಗ್ಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ಅನೇಕ ಬಿಜೆಪಿ ಸಂಸದರು ಅಜಂಖಾನ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೂ ಅವರು ಕ್ಷಮೆಯಾಚಿಸಿಲ್ಲ. ಒಂದು ವೇಳೆ ಅಸಂವಿಧಾನಿಕ ಮಾತುಗಳನ್ನಾಡಿದರೆ ಸಂಸತ್ ಸದಸ್ಯನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಹೇಳಿದ್ದಾರೆ.
ವಿವಿಧ ಪಕ್ಷಗಳ ಮುಖಂಡರೊಂದಿಗೆ ಸಮಾಲೋಚಿಸಿದ ಬಳಿಕ ಅಜಂಖಾನ್ ವಿರುದ್ಧ ಸದ್ಯದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com