ಭಾರತದ ಮೊಟ್ಟ ಮೊದಲ ಮಹಿಳಾ ಶಾಸಕಿ ಡಾ. ಮುತ್ತುಲಕ್ಷ್ಮಿ ರೆಡ್ಡಿ ಗೆ ಗೂಗಲ್ ಡೂಡಲ್ ಗೌರವ

ಭಾರತದ ಮೊಟ್ಟ ಮೊದಲ ಮಹಿಳಾ ಶಾಸಕಿ ಡಾ.ಮುತ್ತುಲಕ್ಷ್ಮಿ ರೆಡ್ಡಿ ಅವರಿಗೆ ಖ್ಯಾತ ಅಂತರ್ಜಾಲ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಗೌರವ ಸಲ್ಲಿಕೆ ಮಾಡಿದೆ.

Published: 30th July 2019 12:00 PM  |   Last Updated: 30th July 2019 09:22 AM   |  A+A-


Google Doodle celebrates Dr. Muthulakshmi Reddi, India's first woman legislator

ಗೂಗಲ್ ಡೂಡಲ್ ಚಿತ್ರ

Posted By : SVN SVN
Source : Online Desk
ನವದೆಹಲಿ: ಭಾರತದ ಮೊಟ್ಟ ಮೊದಲ ಮಹಿಳಾ ಶಾಸಕಿ ಡಾ.ಮುತ್ತುಲಕ್ಷ್ಮಿ ರೆಡ್ಡಿ ಅವರಿಗೆ ಖ್ಯಾತ ಅಂತರ್ಜಾಲ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಗೌರವ ಸಲ್ಲಿಕೆ ಮಾಡಿದೆ.

ಹೌದು.. ಭಾರತೀಯ ವೈದ್ಯೆ ಮತ್ತು ಪತ್ರಕರ್ತೆ, ಸಾಮಾಜಿಕ ಸುಧಾರಕಿ ಮತ್ತು ಪದ್ಮಭೂಷಣ ಪ್ರಶಸ್ತಿ ವಿಜೇತೆ ಮತ್ತು ಭಾರತದ ಮೊಟ್ಟ ಮೊದಲ ಮಹಿಳಾ ಶಾಸಕಿ ಎಂಬ ಕೀರ್ತಿಗೆ ಭಾಜನರಾಗಿರುವ  ಡಾ. ಮುತ್ತುಲಕ್ಷ್ಮಿ ರೆಡ್ಡಿ  ಅವರಿಗೆ ಇಂದು ಜನ್ಮ ದಿನವಾಗಿದ್ದು, ಮುತ್ತುಲಕ್ಷ್ಮಿ ಅವರು, 1886ರ ಜುಲೈ 30ರಂದು ತಮಿಳುನಾಡಿನ ಪುದುಕೋಟೈನಲ್ಲಿ ಜನಿಸಿದರು.

ಮುತ್ತುಲಕ್ಷ್ಮಿ ಅವರ ತಂದೆ ಎಸ್.ನಾರಾಯಣಸ್ವಾಮಿ ಅವರು ಮಹಾರಾಜ ಕಾಲೇಜಿನ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸಿದ್ದರು, ತಾಯಿ ಹೆಸರು ಚಂದ್ರಮಳಲ್. ತಮಿಳುನಾಡಿನ ಪುದುಕೋಟೆಯ ರಾಜವಂಶದ ರಾಜ್ಯದಲ್ಲಿ ಮುತ್ತುಲಕ್ಷ್ಮಿ ಜನಿಸಿದರು. ಮಹಿಳಾ ಶಿಕ್ಷಣಕ್ಕೆ ಭಾರಿ ವಿರೋಧವಿದ್ದ ಕಾಲದಲ್ಲೇ ಹುಡುಗಿಯರು ಎದುರಿಸುವ ಹಲವಾರು ಅಡಚಣೆಗಳ ಹೊರತಾಗಿಯೂ, ಅವರು ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದರು. 1907ರಲ್ಲಿ ಅವರು ಮದ್ರಾಸ್ ಮೆಡಿಕಲ್ ಕಾಲೇಜು ಸೇರಿ 1912 ರಲ್ಲಿ ಪದವಿ ಪಡೆದರು. ಆ ಮೂಲಕ ಭಾರತದಲ್ಲಿ ವೈದ್ಯಕೀಯ ಪದವಿ ಪಡೆದ ಮೊದಲ ಮಹಿಳಾ ವೈದ್ಯರಾಗಿದ್ದರು

ಅಂತೆಯೇ ಮುತ್ತುಲಕ್ಷ್ಮಿ ರೆಡ್ಡಿ 1927ರಲ್ಲಿ ಮದ್ರಾಸ್ ಶಾಸಕಾಂಗ ಸಭೆಗೆ ನೇಮಕಗೊಂಡರು. ಇವರು ಬ್ರಿಟಿಷ್ ಇಂಡಿಯಾದ ಮೊದಲ ಮಹಿಳಾ ಶಾಸಕಿ ಕೂಡ. ರಾಜ್ಯ ಸಮಾಜ ಕಲ್ಯಾಣ ಸಲಹಾ ಮಂಡಳಿಯ ಮೊದಲ ಮಹಿಳಾ ಶಾಸಕಿಯಾಗಿ ಮುತ್ತುಲಕ್ಷ್ಮಿ ನೇಮಕಗೊಂಡಿದ್ದರು. 1926ರಲ್ಲಿ ಮದ್ರಾಸ್ ಶಾಸನ ಸಭೆಗೆ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರಾಗಿ ನಾಮನಿರ್ದೇಶನಗೊಂಡರು. ಭಾರತದ ಶಾಸಕಾಂಗದ ಸದಸ್ಯರಾದ ಮೊದಲ ಮಹಿಳೆಯಾಗಿದ್ದಾರೆ. ದೇವದಾಸಿ ವ್ಯವಸ್ಥೆಯನ್ನು ನಿಷೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1930ರಲ್ಲಿ ಅವರು ಮದ್ರಾಸ್ ಶಾಸನ ಸಭೆಗೆ ರಾಜೀನಾಮೆ ನೀಡಿದರು. ಬಳಿಕ ಅವರು ಮಹಿಳಾ ಸಂಘದ (WIA) ಸಂಸ್ಥಾಪಕ-ಅಧ್ಯಕ್ಷರಾಗಿದ್ದರು ಮತ್ತು ಮದ್ರಾಸ್ ಕಾರ್ಪೊರೇಶನ್ ನ ಮೊದಲ ಆಲ್ಡರ್ ವುಮನ್ ಆಗಿ ನೇಮಕವಾದರು.

ಮುತ್ತುಲಕ್ಷ್ಮಿ ರೆಡ್ಡಿ ಅವರು, 1968ರ ಜುಲೈ 22ರಂದು ಚೆನ್ನೈನಲ್ಲಿ ನಿಧನರಾದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp