ಸುಷ್ಮಾ ಸ್ವರಾಜ್ ಹಾದಿಯಲ್ಲೇ ಸಾಗಲು ಹೆಮ್ಮೆಯಾಗುತ್ತದೆ: ಜೈ ಶಂಕರ್

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಾಗಿದ ಹಾದಿಯಲ್ಲೇ ಸಾಗಲು ಹೆಮ್ಮೆಯಾಗುತ್ತದೆ ಎಂದು ನೂತನ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಾಗಿದ ಹಾದಿಯಲ್ಲೇ ಸಾಗಲು ಹೆಮ್ಮೆಯಾಗುತ್ತದೆ ಎಂದು ನೂತನ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ವಿದೇಶಾಂಗ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಟ್ವೀಟ್ ಮಾಡಿರುವ ಜೈ ಶಂಕರ್ ಅವರು, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇಲ್ಲಿಯವರೆಗೆ ಟ್ವಿಟರ್ ಖಾತೆಯಿಂದ ದೂರವೇ ಉಳಿದಿದ್ದ ಮಾಜಿ ವಿದೇಶಾಂಗ ಕಾರ್ಯದರ್ಶಿ, ಪ್ರಸ್ತುತ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಹೊಸದಾಗಿ ಟ್ವಿಟರ್ ಖಾತೆ ತೆರೆದು ಹಿಂದಿನ ಉತ್ತರಾಧಿಕಾರಿ ಸುಷ್ಮಾ ಸ್ವರಾಜ್ ಹಾದಿಯನ್ನೇ ಅನುಸರಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ನನ್ನ ಸಂಪುಟ ಸಹೋದ್ಯೋಗಿ ಮುರಳೀಧರನ್ ಅವರ ಜೊತೆಯಾಗಿ ನಿಮ್ಮ ಸೇವೆ ಮಾಡಲು ದಿನ 24 ಗಂಟೆಗಳ ಕಾಲ ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. 
ಅನಾರೋಗ್ಯದ ಕಾರಣದಿಂದ ಲೋಕಸಭಾ ಚುನಾವಣೆಯಿಂದ ದೂರವೇ ಉಳಿದ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್, ಬದಲಿಗೆ ಮೋದಿ ಅವರು ತಮ್ಮ ಎರಡನೇ ಅವಧಿಯ ಸಂಪುಟಕ್ಕೆ ಜೈ ಶಂಕರ್ ಅವರನ್ನು ಸೇರಿಸಿಕೊಂಡು ಅವರಿಗೆ ವಿದೇಶಾಂಗ ಖಾತೆಯ ಪ್ರಮುಖ ಹೊಣೆಗಾರಿಕೆಯನ್ನು ನೀಡಿದ್ದಾರೆ. ಭಾರತ- ಅಮೆರಿಕ ಪರಮಾಣು ಒಪ್ಪಂದ ವಿಚಾರದಲ್ಲಿ ಎರಡೂ ದೇಶಗಳ ಸಂಬಂಧ ಉದ್ವಿಗ್ನ ಸ್ಥಿತಿಗೆ ಹೋಗುತ್ತಿದ್ದ ಸಮಯದಲ್ಲಿ ಅದನ್ನು ಜೈಶಂಕರ್ ಅವರು ಬಹಳ ಜಾಣ್ಮೆಯಿಂದ ನಿರ್ವಹಣೆ ಮಾಡಿ ಮೋದಿ ಅವರ ಮೆಚ್ಚುಗೆಗೆ ಪಾತ್ರವಾಗಿದ್ದರು. 
ಈ ನಡುವೆ ಸುಷ್ಮಾ ಅವರನ್ನು ಸಂಪುಟದಿಂದ ಕೈ ಬಿಟ್ಟಿರುವ ಬಗ್ಗೆ ಅನೇಕ ಜನರು ಮತ್ತು ಅನಿವಾಸಿ ಭಾರತಿಯರು ಟ್ವಿಟರ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.  ಭಾರತೀಯರು ವಿಸಾ ಹಾಗೂ ಇನ್ನಿತರ ಸಮಸ್ಯೆಗಳಿಗೆ ಸಿಲುಕಿದಾಗ ತಕ್ಷಣವೇ ಅವುಗಳ ಪರಿಹಾರಕ್ಕೆ ಸುಷ್ಮಾ ಸ್ವರಾಜ್ ಗಮನ ಹರಿಸುತ್ತಿದ್ದರು. 
ಹೀಗಾಗಿ ಅವರು ದೇಶ ಮತ್ತು ಅನಿವಾಸಿ ಭಾರತೀಯರ ಜೊತೆ ತಮ್ಮದೇ ಆದ ಒಡನಾಟ ಇಟ್ಟುಕೊಂಡಿದ್ದರು. ಅವರನ್ನು ಸಂಪುಟದಿಂದ ಕೈ ಬಿಟ್ಟಿರುವ ಬಗ್ಗೆ ಹಲವು ಅನಿವಾಸಿ ಭಾರತೀಯರು ಜಾಲತಾಣದ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com