ಆದ್ಯತೆಯ ವ್ಯಾಪಾರ ಮಾನ್ಯತೆ ರದ್ದು ಗೊಳಿಸಿದ ಅಮೆರಿಕ: ಭಾರತಕ್ಕಿಲ್ಲ ಆತಂಕ!

ಆದ್ಯತಾ ವ್ಯಾಪಾರ ನೀತಿಯಡಿ (ಜಿಎಸ್‌ಪಿ) ಭಾರತದ ಉತ್ಪನ್ನಗಳಿಗೆ ನೀಡಿದ್ದ ಸೌಲಭ್ಯಗಳನ್ನು ಹಿಂತೆಗೆದುಕೊಳ್ಳುವ ಅಮೆರಿಕದ ನಿರ್ಧಾರದಿಂದ ಭಾರತದ ರಫ್ತುಗಳ ಮೇಲೆ ಮಹತ್ವದ ಪರಿಣಾಮವೇನೂ ಆಗದು ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಆದ್ಯತಾ ವ್ಯಾಪಾರ ನೀತಿಯಡಿ (ಜಿಎಸ್‌ಪಿ) ಭಾರತದ ಉತ್ಪನ್ನಗಳಿಗೆ ನೀಡಿದ್ದ ಸೌಲಭ್ಯಗಳನ್ನು ಹಿಂತೆಗೆದುಕೊಳ್ಳುವ ಅಮೆರಿಕದ ನಿರ್ಧಾರದಿಂದ ಭಾರತದ ರಫ್ತುಗಳ ಮೇಲೆ ಮಹತ್ವದ ಪರಿಣಾಮವೇನೂ ಆಗದು ಎಂದು ಹೇಳಲಾಗಿದೆ.
ಭಾರತದ ಜತೆಗೆ ಆದ್ಯತೆಯ ವ್ಯಾಪಾರ ಒಪ್ಪಂದವನ್ನು ಕೊನೆಗೊಳಿಸಲಾಗಿದೆ ಎಂದು ಅಮೆರಿಕ ಸರ್ಕಾರ ಹೇಳಿದ್ದು, ಈ ಸಂಬಂಧದ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸಹಿ ಹಾಕಿರುವುದಾಗಿ ವೈಟ್ ಹೌಸ್ ನ ಘೋಷಣೆ ತಿಳಿಸಿದೆ. ಅಂತೆಯೇ ಜೂನ್​ 5ರಿಂದ ಈ ಆದೇಶ ಜಾರಿಗೆ ಬರುವುದಾಗಿ ಹೇಳಿದೆ. 
ಈ ಒಪ್ಪಂದದಡಿ 560 ಕೋಟಿ ಡಾಲರ್‌ ಮೌಲ್ಯದ ಭಾರತದ ಸರಕುಗಳು ಅಮೆರಿಕಕ್ಕೆ ಸುಂಕರಹಿತವಾಗಿ ರಫ್ತಾಗುತ್ತಿದ್ದು, ಅಮೆರಿಕ ಸರ್ಕಾರದ ಕ್ರಮದಿಂದಾಗಿ ಈ ವಸ್ತುಗಳಿಗೂ ಇನ್ನುಮುಂದೆ ಸುಂಕ ಹೇರಲಾಗುತ್ತದೆ ಎಂದು  ಅಮೆರಿಕ ಹೇಳಿದೆ. 1975ರ ನವೆಂಬರ್​ 24ರಂದು ಹೊರಡಿಸಿದ್ದ ಕಾರ್ಯಕಾರಿ ಆದೇಶ ಸಂಖ್ಯೆ 11888 ಪ್ರಕಾರ ಅಮೆರಿಕ ಅಧ್ಯಕ್ಷರು ಸಾಮಾನ್ಯ ಪದ್ಧತಿಯ ಆದ್ಯತೆಗಳಿಗಾಗಿ (ಜಿಎಸ್​ಪಿ) ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರ ಅಥವಾ ಆದ್ಯತೆಯ ವ್ಯಾಪಾರ ಮಾನ್ಯತೆ ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಸೇರಿಸಿತ್ತು. ಆದರೆ, ಈಗ ಅಮೆರಿಕದ ಉತ್ಪನ್ನಗಳಿಗೆ ಸಮಾನವಾದ ಮತ್ತು ಸುಲಭವಾದ ಮಾರುಕಟ್ಟೆ ಒದಗಿಸುವ ವಿಷಯದಲ್ಲಿ ಭಾರತದಿಂದ ಯಾವುದೇ ಭರವಸೆ ಬಂದಿಲ್ಲ. ಆದ್ದರಿಂದ, ಭಾರತಕ್ಕೆ ನೀಡಲಾಗಿರುವ ಮಾನ್ಯತೆಯನ್ನು 2019ರ ಜೂನ್​ 5ರಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗುತ್ತಿದೆ ಎಂದು ಅಮೆರಿಕ ಹೇಳಿದೆ.
ಇನ್ನು ಅಮೆರಿಕ ಸರ್ಕಾರದ ಈ ನಿರ್ಧಾರ ಭಾರತದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಈ ಹಿಂದೆಯೇ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದ ವಾಣಿಜ್ಯ ಕಾರ್ಯದರ್ಶಿ ಅನೂಪ್‌ ವಾಧ್ವಾನ್‌ ಅವರು, 'ಜಿಎಸ್‌ಪಿ ಅಡಿ ಭಾರತ ಅಮೆರಿಕಕ್ಕೆ 560 ಕೋಟಿ ಡಾಲರ್‌ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಆದರೆ ವಾರ್ಷಿಕವಾಗಿ 19 ಕೋಟಿ ಡಾಲರ್‌ ವಸ್ತುಗಳಿಗೆ ಮಾತ್ರ ಸುಂಕ ವಿನಾಯಿತಿ ದೊರೆಯುತ್ತಿತ್ತು. ಜಿಎಸ್‌ಪಿ ಹಿಂತೆಗೆತದಿಂದಾಗಿ ಭಾರತ ಅಮೆರಿಕಕ್ಕೆ ರಫ್ತು ಮಾಡುವ ಸರಕುಗಳ ಮೇಲೆ ದೊಡ್ಡ ಪರಿಣಾಮವೇನೂ ಆಗದು' ಎಂದು ಹೇಳಿದ್ದಾರೆ.
ವೈದ್ಯಕೀಯ ಉಪಕರಣಗಳು ಮತ್ತು ಡೈರಿ ಉತ್ಪನ್ನಗಳ ರಫ್ತಿಗೆ ಸುಂಕ ವಿನಾಯಿತಿ ನೀಡಬೇಕೆಂಬ ಅಮೆರಿಕದ ಬೇಡಿಕೆ ಕುರಿತು ಭಾರತ ಚೌಕಾಶಿಗೆ ಸಿದ್ಧವಿಲ್ಲ ಎಂದೂ ಅವರು ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com