ದೆಹಲಿ:ಮಹಿಳೆಯರಿಗೆ ಉಚಿತ ಬಸ್, ಮೆಟ್ರೋ ಪ್ರಯಾಣಕ್ಕೆ ಸರ್ಕಾರ ಚಿಂತನೆ

ದೆಹಲಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಂತೆಯೇ ಬಸ್ಸು ಹಾಗೂ ಮೆಟ್ರೋದಲ್ಲಿ ಸಂಚರಿಸುವ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಚಿಂತನೆ ನಡೆಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಂತೆಯೇ  ಬಸ್ಸು ಹಾಗೂ ಮೆಟ್ರೋದಲ್ಲಿ ಸಂಚರಿಸುವ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಚಿಂತನೆ ನಡೆಸಿದೆ.

ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್  ದೆಹಲಿಯ ಮೆಟ್ರೋ ರೈಲು ಕಾರ್ಪೋರೇಷನ್  ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದು,ಈ ಸಂಬಂಧ ಪ್ರಸ್ತಾವನೆಯೊಂದನ್ನು ಸಲ್ಲಿಸುವಂತೆ ಹೇಳಿದ್ದಾರೆ.ಈ ನಡೆಯಿಂದ ಡಿಎಂಆರ್ ಸಿ ಗೆ ಆಗುವ ಆದಾಯ ನಷ್ಟದ ಬಗ್ಗೆಯೂ ರಾಜ್ಯಸರ್ಕಾರಕ್ಕೆ ಮಾಹಿತಿ ನೀಡುವಂತೆ ಅವರು ತಿಳಿಸಿದ್ದಾರೆ.

ಸಾರ್ವಜನಿಕ ಸಾರಿಗೆ ಹಾಗೂ ಮೆಟ್ರೋದಲ್ಲಿ ಸಂಚರಿಸುವ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಸರ್ಕಾರ ಮುಂದಾದರೆ ಡಿಎಂಆರ್ ಸಿ, ದೆಹಲಿ ಸಾರಿಗೆ ನಿಗಮ  ಸಾಕಷ್ಟು ಆದಾಯ ನಷ್ಟ ಅನುಭವಿಸಬೇಕಾಗುತ್ತದೆ ಎಂದು  ದೆಹಲಿ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.

ಪ್ರತಿದಿನ ದೆಹಲಿ ಮೆಟ್ರೋದಲ್ಲಿ 30 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಮಹಿಳಾ ಪ್ರಯಾಣಿಕರ ಸಂಖ್ಯೆ ಬಗ್ಗೆ ಹೊಸದಾಗಿ ಸಮೀಕ್ಷೆ ಮಾಡಿಸಿದ್ದರೂ ಆಗುವ ನಷ್ಟದ ಬಗ್ಗೆ ಲೆಕ್ಕಾಚಾರ ಆಗುವುದು ಕಷ್ಟಸಾಧ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ.  

ರಾಷ್ಟ್ರ ರಾಜಧಾನಿ ಜನರು ರೈಲಿಗಿಂತಲೂ  ಹೆಚ್ಚಾಗಿ ಬಸ್ಸುನ್ನು ಬಳಸುತ್ತಾರೆ. ಸುಮಾರು 42 ಲಕ್ಷ ಪ್ರಯಾಣಿಕರು ಬಸ್ಸಿನಲ್ಲಿಯೇ ಸಂಚರಿಸುತ್ತಾರೆ. ಆದರೆ, ಬಸ್ಸಿನಲ್ಲಿ ತೆರಳುವ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ.20ಕ್ಕಿಂತ ಹೆಚ್ಚಿರುವುದಿಲ್ಲ ಎಂದು ದೆಹಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಯುರೋಪಿಯನ್ ರಾಷ್ಟ್ರವಾದ ಲಕ್ಸೆಂಬರ್ಗ್ ನಲ್ಲಿ  ಸಾರ್ವಜನಿಕ ಬಸ್ ಬಳಸುವಂತೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದ್ದು, ಬಸ್ ದರವನ್ನು ರದ್ದುಪಡಿಸಲು ಚಿಂತನೆ ನಡೆಸಲಾಗಿದೆ. ಫ್ರಾನ್ಸಿನ ಡಾಂಕಿರ್ಕ್ ಮತ್ತು ಇಸ್ತೊನಿಯಾದ ತಾಲ್ಲಿನ್  ಸೇರಿದಂತೆ ಯುರೋಪಿನ ಕೆಲ ನಗರಗಳಲ್ಲಿ ಈಗಾಗಲೇ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com