ಮಹಾತ್ಮಾ ಗಾಂಧೀಜಿ ಪ್ರತಿಮೆ, ಭಾವಚಿತ್ರವನ್ನು ತೆಗೆಯಿರಿ; ವಿವಾದ ಸೃಷ್ಟಿಸಿದ ಮಹಿಳಾ ಐಎಎಸ್ ಅಧಿಕಾರಿ ಟ್ವೀಟ್!

ವಿಶ್ವದಾದ್ಯಂತ ಇರುವ ಮಹಾತ್ಮಾ ಗಾಂಧೀಜಿ ಪ್ರತಿಮೆಗಳನ್ನು ತೆಗೆದುಹಾಕಬೇಕು ಮತ್ತು ನೋಟುಗಳಿಂದ ...

Published: 02nd June 2019 12:00 PM  |   Last Updated: 02nd June 2019 02:28 AM   |  A+A-


Mahatma Gandhi

ಮಹಾತ್ಮಾ ಗಾಂಧೀಜಿ

Posted By : SUD SUD
Source : PTI
ಮುಂಬೈ: ವಿಶ್ವದಾದ್ಯಂತ ಇರುವ ಮಹಾತ್ಮಾ ಗಾಂಧೀಜಿ ಪ್ರತಿಮೆಗಳನ್ನು ತೆಗೆದುಹಾಕಬೇಕು ಮತ್ತು ನೋಟುಗಳಿಂದ ಸಹ ಅವರ ಭಾವಚಿತ್ರವನ್ನು ತೆಗೆಯಬೇಕು ಎಂದು ಮುಂಬೈ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಮಾಡಿರುವ ಟ್ವೀಟ್ ವಿವಾದ ಸೃಷ್ಟಿಸಿದೆ.

ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರ ಹೆಸರಿನಲ್ಲಿರುವ ದೇಶದ ಸಂಸ್ಥೆಗಳು ಮತ್ತು ರಸ್ತೆಗಳಿಗೆ ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ ಅವರು, ಮಹಾತ್ಮಾ ಗಾಂಧಿಯನ್ನು ನಾಥೂರಾಮ್ ಗೋಡ್ಸೆ ಕೊಂದಿದ್ದು ಒಳ್ಳೆಯದೇ ಆಯಿತು ಎಂದಿದ್ದರು.

ವಿವಾದ ಸೃಷ್ಟಿಯಾದ ನಂತರ ಮಹಿಳಾ ಐಎಎಸ್ ಅಧಿಕಾರಿ ನಿಧಿ ಚೌಧರಿಯವರನ್ನು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದ್ದು, ಈ ಕಟು ವಾಸ್ತವವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿ ಟ್ವೀಟ್ ನ್ನು ಡಿಲೀಟ್ ಮಾಡಿದ್ದಾರೆ.
ಮಹಾತ್ಮಾ ಗಾಂಧಿಯವರನ್ನು ತೆಗಳಿ ವಿವಾದಾತ್ಮಕ ಟ್ವೀಟ್ ಮಾಡಿ ನಾಥೂರಾಮ್ ಗೋಡ್ಸೆಯವರನ್ನು ವೈಭವೀಕರಿಸಿದ್ದಕ್ಕೆ ನಿಧಿ ಚೌಧರಿಯವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಎನ್ ಸಿಪಿ ಒತ್ತಾಯಿಸಿದೆ.

ಮಹಾತ್ಮಾ ಗಾಂಧಿಯವರ ಮೃತದೇಹದ ಫೋಟೋ ಹಾಕಿ ಮೇ 17ರಂದು ಮಾಡಿದ್ದ ಟ್ವೀಟ್ ನಲ್ಲಿ ನಿಧಿ ಚೌಧರಿ, 150ನೇ ಜಯಂತಿಯನ್ನು ಅದ್ವಿತೀಯವಾಗಿ ಆಚರಿಸುವುದರಲ್ಲಿ ಏನಿದೆ, ಏನಾಗುತ್ತಿದೆ ನಮ್ಮ ದೇಶದಲ್ಲಿ, ಭಾರತದ ಕರೆನ್ಸಿಗಳು, ಪ್ರತಿಮೆಗಳಿಂದ ಮಹಾತ್ಮಾ ಗಾಂಧಿಯವರ ಭಾವಚಿತ್ರವನ್ನು ತೆಗೆದುಹಾಕಲು ಇದು ಸರಿಯಾದ ಸಮಯ, ಅವರ ಹೆಸರಿನಲ್ಲಿರುವ ಶಿಕ್ಷಣ ಸಂಸ್ಥೆಗಳು, ರಸ್ತೆಗಳಿಗೆ ಮರು ನಾಮಕರಣ ಮಾಡಬೇಕು. ಅದು ನಿಜಕ್ಕೂ ನಮ್ಮ ಕಡೆಯಿಂದ ಮಾಡಬಹುದಾದ ನಿಜವಾದ ಗೌರವ, 1948ರ ಜನವರಿ 30ಕ್ಕೆ ಗೋಡ್ಸೆಯವರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಎನ್ ಸಿಪಿ ನಾಯಕ ಜಿತೇಂದ್ರ ಔಹಾದ್ ಚೌಧರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ವಿವಾದ ಸೃಷ್ಟಿಯಾದ ಬಳಿಕ ಪ್ರತಿಕ್ರಿಯಿಸಿರುವ ನಿಧಿ ಚೌಧರಿ, ನನ್ನ ಟ್ವೀಟ್ ನ್ನು ತಪ್ಪಾಗಿ ಅರ್ಥೈಸಿದವರು ನನ್ನ ಟೈಮ್ ಲೈನ್ ನೋಡಬೇಕು. ಕಳೆದ ಕೆಲವು ತಿಂಗಳಿನಿಂದ ನಾನು ಮಾಡಿರುವ ಟ್ವೀಟ್ ಗಳಿಗೆ ಸ್ವಯಂ ವಿವರಣೆ ನೀಡಿದ್ದೇನೆ. ಕಟುವಾಗಿ ಟೀಕಿಸಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿರುವುದಕ್ಕೆ ನನಗೆ ತೀವ್ರ ದುಃಖವಾಗುತ್ತಿದೆ ಎಂದಿದ್ದಾರೆ.

ನಾನು ಯಾವತ್ತೂ ಗಾಂಧೀಜಿಯವರಿಗೆ ಅವಮಾನ ಮಾಡಿಲ್ಲ. ಗಾಂಧೀಜಿಯವರು ನಮ್ಮ ದೇಶದ ಪಿತಾಮಹ ಮತ್ತು 2019ರ ಈ ಹೊತ್ತಿನಲ್ಲಿ ದೇಶಕ್ಕಾಗಿ ನಾವೇನಾದರೊಂದು ಮಾಡಬೇಕು. ನನ್ನ ಟ್ವೀಟ್ ನ್ನು ತಪ್ಪಾಗಿ ಅರ್ಥೈಸಿಕೊಂಡವರು ಅದರಲ್ಲಿನ ಕಟು ವಾಸ್ತವವನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದು ನಿನ್ನೆ ನಿಧಿ ಟ್ವೀಟ್ ಮಾಡಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp