ಇ-ಮೇಲ್ ಹ್ಯಾಕ್, ನಿವೃತ್ತ ಸಿಜೆಐ ಲೋಧಾಗೆ 1 ಲಕ್ಷ ರೂ. ವಂಚನೆ

ಸೈಬರ್ ಖದೀಮರು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್‌.ಎಂ ಲೋಧಾ ಅವರ ಮಾಜಿ ಸಹೋದ್ಯೋಗಿಯ ಇ-ಮೇಲ್ ಹ್ಯಾಕ್ ಮಾಡಿ...
ಆರ್ ಎಂ ಲೋಧಾ
ಆರ್ ಎಂ ಲೋಧಾ
ನವದೆಹಲಿ: ಸೈಬರ್ ಖದೀಮರು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್‌.ಎಂ ಲೋಧಾ ಅವರ ಮಾಜಿ ಸಹೋದ್ಯೋಗಿಯ ಇ-ಮೇಲ್ ಹ್ಯಾಕ್ ಮಾಡಿ 1 ಲಕ್ಷ ರೂ. ವಂಚಿಸಿದ್ದಾರೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಬಿಪಿ ಸಿಂಗ್ ಅವರ ಇ-ಮೇಲ್ ಹ್ಯಾಕ್ ಮಾಡಿದ ಖದೀಮರು, ಅವರ ಖಾತೆ ಮೂಲಕ ನಕಲಿ ಇ-ಮೇಲ್‌ಗಳನ್ನು ಲೋಧಾ ಅವರಿಗೆ ರವಾನಿಸಿ ತುರ್ತಾಗಿ 1 ಲಕ್ಷ ರೂ ನೆರವು ಕೇಳಿದ್ದಾರೆ. ಲೋಧಾ ಅವರು ನೆರವಿಗೆ ಧಾವಿಸಿ 1 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಬಿ.ಪಿ ಸಿಂಗ್ ಅವರ ಇ-ಮೇಲ್ ಖಾತೆಯನ್ನು ಹ್ಯಾಕ್ ಅಥವಾ ನಕಲಿ ಖಾತೆ ಸೃಷ್ಟಿಸಲಾಗಿದೆಯೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜಸ್ಟಿಸ್ ಲೋಧಾ ಅವರಿಗೆ ಕಳುಹಿಸಲಾದ ಇ-ಮೇಲ್‌ನಲ್ಲಿ ಜಸ್ಟಿಸ್ ಸಿಂಗ್ ಅವರು ತಮ್ಮ ಸೋದರ ಸಂಬಂಧಿಯ ಚಿಕಿತ್ಸೆಗಾಗಿ 1 ಲಕ್ಷ ರೂ.ಗಳ ತುರ್ತು ಅವಶ್ಯಕತೆಯಿದೆ ಎಂದು ಕೋರಿದ್ದಾರೆ ಎಂದು ಹೇಳಲಾಗಿದೆ.
ಲೋಧಾ ಅವರು ಈ ಸಂಬಂಧ ಮೇ 31ರಂದು ಮಾಳವೀಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದಾರೆ.
ನಿವೃತ್ತ ಸಿಜೆಐ ಲೋಧಾ ಸಲ್ಲಿಸಿದ ದೂರಿನ ಪ್ರಕಾರ, ಜಸ್ಟಿಸ್ ಬಿ.ಪಿ ಸಿಂಗ್ ಅವರ ಜತೆ ನಿಯಮಿತವಾಗಿ ಇ-ಮೇಲ್ ಸಂವಾದ ನಡೆಸುತ್ತಿದ್ದರು. ಏಪ್ರಿಲ್ 19ರಂದು ಮಧ್ಯರಾತ್ರಿ 1:40ಕ್ಕೆ ಜಸ್ಟಿಸ್ ಸಿಂಗ್‌ ಅವರಿಂದ ಮೇಲ್‌ ಬಂದಿತ್ತು. ಬೆಳಗಿನ ಜಾವ 3:30ಕ್ಕೆ ಜಸ್ಟಿಸ್ ಲೋಧಾ ಇ-ಮೇಲ್ ಪರಿಶೀಲಿಸಿದಾಗ, ತಮ್ಮ ಮಾಜಿ ಸಹೋದ್ಯೋಗಿ ತುರ್ತು ಹಣದ ನೆರವು ಕೇಳಿರುವುದು ಗೊತ್ತಾಯಿತು. ಜಸ್ಟಿಸ್ ಸಿಂಗ್‌ 'ದೂರವಾಣಿ ಕರೆಗೆ ಲಭ್ಯರಿಲ್ಲ' ಎಂದು ಇ-ಮೇಲ್‌ನಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. 
ಜಸ್ಟಿಸ್ ಲೋಧಾ ಅವರು ತಕ್ಷಣವೇ ಇ-ಮೇಲ್‌ಗೆ ಸ್ಪಂದಿಸಿದರು. ಬೆಳಗಿನ ಜಾವ 3:51ಕ್ಕೆ ಪ್ರತ್ಯುತ್ತರವೂ ಬಂದಿತ್ತು. ಅದರಲ್ಲಿ, ಸಿಂಗ್ ಅವರ ಸೋದರ ಸಂಬಂಧಿ ತೀವ್ರ ಸ್ವರೂಪದ ಲಿಂಫೋಬ್ಲಾಸ್ಟಿಕ್ ಲ್ಯಕೇಮಿಯಾದಿಂದ ನರಳುತ್ತಿದ್ದು ಶಸ್ತ್ರ ಚಿಕಿತ್ಸೆಗಾಗಿ ತುರ್ತು 1 ಲಕ್ಷ ರೂ ಅಗತ್ಯವಿದೆ ಎಂದು ಹೇಳಲಾಗಿತ್ತು. 
ಒಂದು ದಿನ ಸಿಂಗ್ ತಮ್ಮ ಇ-ಮೇಲ್ ಖಾತೆ ಹ್ಯಾಕ್ ಆಗಿರುವುದಾಗಿ ತಿಳಿಸಿದರು. ತಾವು ಹಣದ ನೆರವು ಯಾಚಿಸಿದಂತೆ ತಮ್ಮ ಖಾತೆಯಿಂದ ಹಲವು ಸಂಬಂಧಿಗಳಿಗೆ ಮೇಲ್ ರವಾನೆಯಾಗಿದೆ ಎಂದು ತಿಳಿಸಿದರು. ಆಗ, ನನಗೂ ಅಂತಹ ಮೇಲ್ ಬಂದಿದ್ದು, ನಾನು ನಿಮಗೆ ಹಣ ಕಳುಹಿಸಿದ್ದೆ ಎಂದು ಹೇಳಿದೆ' ಎಂದು ಲೋಧಾ ವಿವರಿಸಿದ್ದಾರೆ. 
ಬಳಿಕ ತಾವು ಮೋಸ ಹೋಗಿರುವುದು ತಿಳಿಯಿತು. ಹ್ಯಾಕರ್‌ ನೀಡಿದ್ದ ಬ್ಯಾಂಕ್ ಖಾತೆ ಸಂಖ್ಯೆಗೆ ಎರಡು ಬಾರಿ 50,000 ರೂ.ಗಳಂತೆ ಒಟ್ಟು 1 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾಗಿ ಜಸ್ಟಿಸ್ ಲೋಧಾ ದೂರಿನಲ್ಲಿ ತಿಳಿಸಿದ್ದಾರೆ.
ಶಸ್ತ್ರಕ್ರಿಯೆ ನಡೆಸುವ ಸರ್ಜನ್ ಖಾತೆಗೆ ಹಣ ವರ್ಗಾಯಿಸುವಂತೆ ಇ-ಮೇಲ್‌ನಲ್ಲಿ ಸೂಚಿಸಲಾಗಿತ್ತು. ನೆರವು ನೀಡುವುದಾದರೆ ಖಾತೆ ವಿವರಗಳನ್ನು ಕೂಡಲೇ ಕಳುಹಿಸುವುದಾಗಿಯೂ ಇ-ಮೇಲ್ ಸೂಚಿಸಿತ್ತು. 
ಜಸ್ಟಿಸ್ ಲೋಧಾ ಅವರು ಏಪ್ರಿಲ್ 19ರ ಬೆಳಗ್ಗೆ 4 ಗಂಟೆಗೆ ಇ-ಮೇಲ್‌ಗೆ ಪ್ರತಿಕ್ರಿಯಿಸಿ, ಬ್ಯಾಂಕ್ ವಿವರ ಕೇಳಿದ್ದಾರೆ. ಅದಾಗಿ 10 ನಿಮಿಷದೊಳಗೆ ಬ್ಯಾಂಕ್ ವಿವರದ ಮಾಹಿತಿಯುಳ್ಳ ಇ-ಮೇಲ್ ವಂಚಕರ ಕಡೆಯಿಂದ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com