ತೆಲಂಗಾಣದಲ್ಲಿ 'ಕೈ'ಗೆ ಆಘಾತ: ಸಾಮೂಹಿಕವಾಗಿ ಟಿಆರ್ ಎಸ್ ಸೇರಲು ಮುಂದಾದ ಕಾಂಗ್ರೆಸ್ ಶಾಸಕರು, ವಿಲೀನಕ್ಕೆ ಮನವಿ

ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಆಘಾತದಿಂದ ಇನ್ನೂ ಹೊರಬರದ ಕಾಂಗ್ರೆಸ್ ಗೆ ಈಗ ಮತ್ತೊಂದು ದೊಡ್ಡ ಆಘಾತ ಎದುರಾಗಿದ್ದು....
ಸ್ಪೀಕರ್ ಭೇಟಿ ಮಾಡಿದ ಕಾಂಗ್ರೆಸ್ ಶಾಸಕರು
ಸ್ಪೀಕರ್ ಭೇಟಿ ಮಾಡಿದ ಕಾಂಗ್ರೆಸ್ ಶಾಸಕರು
ಹೈದರಾಬಾದ್: ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಆಘಾತದಿಂದ ಇನ್ನೂ ಹೊರಬರದ ಕಾಂಗ್ರೆಸ್ ಗೆ ಈಗ ಮತ್ತೊಂದು ದೊಡ್ಡ ಆಘಾತ ಎದುರಾಗಿದ್ದು, ತೆಲಂಗಾಣದಲ್ಲಿ 12 ಕಾಂಗ್ರೆಸ್ ಶಾಸಕರು ಟಿಆರ್ ಎಸ್ ಸೇರಲು ಮುಂದಾಗಿದ್ದಾರೆ.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ 18 ಶಾಸಕರನ್ನು ಹೊಂದಿದ್ದು, ಈ ಪೈಕಿ 12 ಕಾಂಗ್ರೆಸ್ ಶಾಸಕರು ತೆಲಂಗಾಣ ಸ್ಪೀಕರ್ ಪಿ.ಶ್ರೀನಿವಾಸ್ ರೆಡ್ಡಿ ಅವರನ್ನು ಭೇಟಿಯಾಗಿ ಸಿಎಲ್ ಪಿ(ಕಾಂಗ್ರೆಸ್ ಶಾಸಕಾಂಗ ಪಕ್ಷ)ಯಿಂದ ಆಡಳಿತಾರೂಢ ಟಿಆರ್ ಎಸ್ ಜೊತೆ ವಿಲೀನವಾಗುವ ಬಗ್ಗೆ ನಿವೇದನಾ ಪತ್ರ ಸಲ್ಲಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ನ 12 ಶಾಸಕರು ಟಿಆರ್ ಎಸ್ ಸೇರುವುದಾಗಿ ಘೋಷಿಸಿದ್ದಾರೆ. ಒಂದು ವೇಳೆ ಸ್ಪೀಕರ್ ಕಾಂಗ್ರೆಸ್ ಶಾಸಕರ ಮನವಿಯನ್ನು ಒಪ್ಪಿಕೊಂಡರೆ, ಕಾಂಗ್ರೆಸ್ ಪ್ರತಿಪಕ್ಷದ ಸ್ಥಾನವನ್ನೂ ಕಳೆದುಕೊಳ್ಳಲಿದೆ.  ಏತನ್ಮಧ್ಯೆ ಟಿಆರ್ ಎಸ್ ಗೆ ಸೇರ್ಪಡೆಗೊಳ್ಳುವ ಕಾಂಗ್ರೆಸ್ ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ವರದಿ ತಿಳಿಸಿದೆ.
ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಅವರು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ನಲಗೊಂಡಾದಿಂದ ಸಂಸದರಾಗಿ ಆಯ್ಕೆಯಾಗಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com