ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ಆಯುಷ್ಮಾನ್‌ಗಿಂತ ದೆಹಲಿ ಆರೋಗ್ಯ ಯೋಜನೆ 10 ಪಟ್ಟು ಉತ್ತಮ: ಕೇಜ್ರಿವಾಲ್

ದೆಹಲಿಯ ಆರೋಗ್ಯ ಯೋಜನೆಯನ್ನು ನಿಲ್ಲಿಸಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದರೆ ದೆಹಲಿಯ ಜನರಿಗೆ ತೊಂದರೆಯಾಗಲಿದೆ...
ನವದೆಹಲಿ: ದೆಹಲಿಯ ಆರೋಗ್ಯ ಯೋಜನೆಯನ್ನು ನಿಲ್ಲಿಸಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದರೆ ದೆಹಲಿಯ ಜನರಿಗೆ ತೊಂದರೆಯಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ ಹರ್ಷವರ್ಧನ್ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.
ದೆಹಲಿಯಲ್ಲಿ ಈಗಾಗಲೇ ಅತ್ಯುತ್ತಮ ಆರೋಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಅದನ್ನು ಸ್ಥಗಿತಗೊಳಿಸಿ ಇನ್ನೊಂದು ಯೋಜನೆಯನ್ನು ಜಾರಿಗೆ ತಂದರೆ ಯಾರಿಗೂ ಅನುಕೂಲವಿಲ್ಲ. ದೆಹಲಿಯ ಆರೋಗ್ಯ ಯೋಜನೆಯನ್ನು ಸ್ಥಗಿತಗೊಳಿಸಿ ಆಯುಷ್ಮಾನ್‌ ಭಾರತ್ ಯೋಜನೆ ಜಾರಿಗೊಳಿಸಿದರೆ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗಲಿದೆ ಎಂದು ಪತ್ರದಲ್ಲಿ ದೆಹಲಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಕೇಂದ್ರದ ಆಯುಷ್ಮಾನ್ ಭಾರತ್- ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಗೆ ಕೈಜೋಡಿಸುವಂತೆ ಜೂನ್ 3ರಂದು ಡಾ. ಹರ್ಷವರ್ಧನ್ ಅವರು ಮುಖ್ಯಮಂತ್ರಿಗೆ ಬರೆದ ಪತ್ರಕ್ಕೆ ಕೇಜ್ರಿವಾಲ್ ಈ ಉತ್ತರ ನೀಡಿದ್ದಾರೆ.
ದೆಹಲಿಯ ಆರೋಗ್ಯ ಯೋಜನೆಯಲ್ಲಿ ಏನಾದರೂ ಕೈಬಿಟ್ಟಿದ್ದರೆ, ಅಥವಾ ಕೊರತೆ ಉಂಟಾಗಿದ್ದರೆ ಅದನ್ನು ಕೇಂದ್ರ ಸಚಿವರು ಸೇರಿಸಬಹುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿಯ ಆರೋಗ್ಯ ಸೇವೆ, ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಗಿಂತ 10 ಪಟ್ಟು ಚೆನ್ನಾಗಿದೆ. ದೆಹಲಿಯ ಜನರನ್ನು ಉತ್ತಮ ಆರೋಗ್ಯ ಸೇವೆಯಿಂದ ಹೊರಗಿಡಲು ಕೇಂದ್ರ ಸರ್ಕಾರ ಬಯಸುತ್ತದೆಯೇ? ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ನೀವು ಒಬ್ಬ ಅತ್ಯುತ್ತಮ ಅನುಭವಿ ವೈದ್ಯ. ದೆಹಲಿಯ ಆರೋಗ್ಯ ಯೋಜನೆಯಲ್ಲಿ ಯಾವುದಾದರೂ ಸುಧಾರಣಾ ಅಂಶಗಳನ್ನು ಸೇರಿಸಲು ಬಯಸುವುದಾದರೆ ವೈಯಕ್ತಿಕವಾಗಿ ಸಲಹೆ ನೀಡಿ, ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಜೂನ್ 4ರಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ದೆಹಲಿಯ ಎಎಪಿ ಸರ್ಕಾರ ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯನ್ನು ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎಂದು ಪ್ರಕಟಿಸಿದ್ದರು.
ಇಲ್ಲಿನ ಶೇಕಡಾ 100ರಷ್ಟು ಜನರಿಗೆ ನಾವು ಆರೋಗ್ಯ ಸೌಲಭ್ಯ ಒದಗಿಸುತ್ತಿದ್ದೇವೆ, ಇಲ್ಲಿನ ಬಡವರಿಗೂ ಶ್ರೀಮಂತರಿಗೂ ಯೋಜನೆಯಡಿ ಚಿಕಿತ್ಸೆ ದೊರೆಯುತ್ತಿದೆ. ಆದ್ದರಿಂದ ಕೇಂದ್ರದ ಯೋಜನೆ ಇಲ್ಲಿಗೆ ಅಗತ್ಯವಿಲ್ಲ. ದೆಹಲಿಯ ಎಲ್ಲಾ ಜನರಿಗೆ ಆರೋಗ್ಯ ಒದಗಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವಾರ್ಷಿಕ ತಲಾ 5 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆ ಸೌಲಭ್ಯ ದೊರಕುತ್ತದೆ. ಕಳೆದ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಈ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರಲಾಗಿದೆ. ಆದರೆ ಕೇಜ್ರಿವಾಲ್ ಅವರು ಯೋಜನೆಯನ್ನು ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com