ಪ್ರಧಾನಿ ಮೋದಿಯನ್ನು ಚೇಳಿಗೆ ಹೋಲಿಸಿದ ಶಶಿ ತರೂರ್ ಗೆ ಜಾಮೀನು

ಆರ್ ಎಸ್ ಎಸ್ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಶಿವಲಿಂಗದ ಮೇಲೆ ಕುಳಿತ ಚೇಳು’ ಎಂದು ಹೇಳಿರುವುದಾಗಿ ಆರೋಪಿಸಿದ್ದ...
ಶಶಿ ತರೂರ್
ಶಶಿ ತರೂರ್
ನವದೆಹಲಿ: ಆರ್ ಎಸ್ ಎಸ್ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಶಿವಲಿಂಗದ ಮೇಲೆ ಕುಳಿತ ಚೇಳು’ ಎಂದು ಹೇಳಿರುವುದಾಗಿ ಆರೋಪಿಸಿದ್ದ ಕಾಂಗ್ರೆಸ್ ನಾಯಕ ಶಶಿತರೂರ್ ಅವರು ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಶುಕ್ರವಾರ ದೆಹಲಿ ಕೋರ್ಟ್ ನಿಂದ ಜಾಮೀನು ಪಡೆದುಕೊಂಡಿದ್ದಾರೆ.
ಜಾಮೀನು ಕೋರಿ ಶಶಿ ತರೂರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು, ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಜೊತೆಗೆ, 20 ಸಾವಿರ ರೂ. ವೈಯಕ್ತಿಕ ಖಾತರಿ ಮೊತ್ತ ಪಾವತಿಸುವಂತೆ ತರೂರ್ ಗೆ  ಷರತ್ತು ವಿಧಿಸಿದ್ದಾರೆ.
ಶಶಿ ತರೂರ್ ಅವರ ಹೇಳಿಕೆಯಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ದೆಹಲಿಯ ಬಿಜೆಪಿ ನಾಯಕ ರಾಜೀವ್ ಬಬ್ಬರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಕಳೆದ ಅಕ್ಟೋಬರ್ ನಲ್ಲಿ ಶಶಿ ತರೂರ್ ಅವರು, ನರೇಂದ್ರ ಮೋದಿ ಅವರನ್ನು ಆರ್ ಎಸ್ ಎಸ್ ನಾಯಕರೊಬ್ಬರು ಶಿವಲಿಂಗದ ಮೇಲೆ ಕುಳಿತ ಚೇಳು ಎಂದು ಕರೆದಿದ್ದಾರೆ ಎಂದು ಹೇಳಿಕೆ ನೀಡಿದ್ದರು. 
ತಾವು ಓರ್ವ ಶಿವನ ಭಕ್ತ. ತರೂರ್ ಅವರು ತಮ್ಮ ಹೇಳಿಕೆಯ ಮೂಲಕ ಸಾವಿರಾರು ಶಿವನ ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಶಿವನ ಭಕ್ತರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದಲೇ ಈ ಹೇಳಿಕೆ ನೀಡಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದರು.
ಶಶಿ ತರೂರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಹಾಗೂ 500 ಅಡಿಯಲ್ಲಿ ದೂರು ದಾಖಲಿಸಲಾಗಿದೆ.
ಶಶಿತರೂರ್ ಅವರು, ಅನಾಮಿಕ ಆರ್ ಎಸ್ ಎಸ್ ನಾಯಕರೊಬ್ಬರು ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕ ನೀಡಿದ್ದು, ಮೋದಿ ಶಿವಲಿಂಗದ ಮೇಲಿನ ಚೇಳಿನಂತೆ. ಅವರನ್ನು ಕೈಯಿಂದ ಎತ್ತಿ ಹೊರಹಾಕಲೂ ಆಗದು. ಚಪ್ಪಲಿ ಎಸೆದು ಕೊಲ್ಲಲೂ ಆಗದು ಎಂದಿದ್ದಾರೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com