ಜಗನ್ ಸಂಪುಟದ 25 ಸಚಿವರಿಂದ ಪ್ರಮಾಣವಚನ, ಶಾಸಕಿ ರೋಜಾಗಿಲ್ಲ ಸಚಿವ ಸ್ಥಾನ

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಸಂಪುಟದ 25 ಸಚಿವರು ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಆದರೆ ಜಗನ್...
ಜಗನ್ ಮೋಹನ್ ರೆಡ್ಡಿ
ಜಗನ್ ಮೋಹನ್ ರೆಡ್ಡಿ
ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಸಂಪುಟದ 25 ಸಚಿವರು ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಆದರೆ ಜಗನ್ ಸಂಪುಟದಲ್ಲಿ ನಟಿ ಹಾಗೂ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ವೈಎಸ್ಆರ್ ಪಿಯ ಬೆಂಕಿಚೆಂಡು ಎಂದೇ ಕರೆಸಿಕೊಳ್ಳುವ ರೋಜಾ ಅವರಿಗೆ ಸ್ಥಾನ ನೀಡದಿರುವದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಇಂದು ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ವೆಲಗಾಪುಡಿಯ ರಾಜ್ಯ ಸಚಿವಾಲಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮೂವರು ಮಹಿಳೆಯರು ಸೇರಿದಂತೆ 25 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
ಇಪ್ಪತ್ತೈದು ಸಚಿವರ ಪೈಕಿ ಐವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಲು ಜಗನ್ ರೆಡ್ಡಿ ಮುಂದಾಗಿದ್ದಾರೆ. ಒಂದು ರಾಜ್ಯಕ್ಕೆ ಐವರು ಉಪಮುಖ್ಯಮಂತ್ರಿಗಳ ಪರಿಕಲ್ಪನೆ ದೇಶದಲ್ಲಿ ಇದೇ ಮೊದಲು. ಎಲ್ಲಾ ಸಮುದಾಯಕ್ಕೂ ಸಮಾನ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಮುಖ್ಯಮಂತ್ರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಇತರೆ ಶಾಸಕರಿಗೂ ಎರಡೂವರೆ ವರ್ಷದ ನಂತರ ಅವಕಾಶ ನೀಡಲಾಗುವುದು ಎಂದು ಜಗನ್ ಭರವಸೆ ನೀಡಿದ್ದಾರೆ. 
ಶಾಸಕಿ ರೋಜಾ ತಮ್ಮ ಅತ್ಯುತ್ತಮ ಭಾಷಣ ಕಲೆ ಹಾಗೂ ವೈಎಸ್ಆರ್ ಪಿ ಅಧ್ಯಕ್ಷರ ವಿರುದ್ಧ ತೆಲುಗು ದೇಶಂ ಪಕ್ಷದ ಮುಖಂಡರು ಮಾಡಿದ ಆರೋಪಗಳನ್ನು ಖಂಡಿಸುವ ಮೂಲಕ ಗಮನ ಸೆಳೆದಿದ್ದರು.
ವಿಧಾನಸಭೆಯಲ್ಲಿ ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ವಿರುದ್ಧ ಆಕ್ರಮಣಕಾರಿ ವಾಗ್ದಾಳಿ ನಡೆಸಿದ ಕಾರಣಕ್ಕೆ ಸ್ಪೀಕರ್ ಕೋಡಾಲ ಶಿವ ಪ್ರಸಾದ್ ರಾವ್, ಆಕೆಯನ್ನು ಒಂದು ವರ್ಷಗಳ ಕಾಲ ವಿಧಾನಸಭೆಯಿಂದ ಅಮಾನತುಗೊಳಿಸಿದ್ದರು.
ನಾಗಿರಿ ಕ್ಷೇತ್ರದಿಂದ ಎರಡು ಸಲ ಶಾಸಕಿಯಾಗಿ ಆಯ್ಕೆಯಾಗಿರುವ ರೋಜಾ, ಈ ಬಾರಿ ಸಂಪುಟದಲ್ಲಿ ಸ್ಥಾನ ಪಡೆಯುವುದು ಖಚಿತ ಎಂದೇ ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೆ ಸಚಿವರ ಆಯ್ಕೆ ಪಟ್ಟಿಯಲ್ಲಿ ಆಕೆಯ ಹೆಸರಿಲ್ಲದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಶಾಸಕಿ ರೋಜಾ ಸಂಪುಟ ಸೇರುವ ಬಗ್ಗೆ ಕಳೆದ 3 ತಿಂಗಳಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹರಿದಾಡಿತ್ತು. ಗೃಹ ಸಚಿವೆಯ ಸ್ಥಾನ ಸಿಗಬಹುದೆಂದು ಆಕೆಯ ಅಭಿಮಾನಿಗಳು ಊಹಿಸಿದ್ದರು.
ಆಸಕ್ತಿಕರ ವಿಷಯವೆಂದರೆ, ಕಳೆದ ವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರೋಜಾ, ತಮಗೆ ಸಚಿವಗಿರಿ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದರು. 
ಶಾಸಕಿ ರೋಜಾ ಅವರು ರೆಡ್ಡಿ ಸಮುದಾಯಕ್ಕೆ ಸೇರಿದವರು. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರು ಪ್ರತಿಯೊಂದು ಸಮುದಾಯಕ್ಕೂ ಸಚಿವ ಸ್ಥಾನ ಸಿಗುವಂತೆ ಸಮತೋಲನ ಕಾಯ್ದುಕೊಂಡಿದ್ದಾರೆ. ಈಗಾಗಲೇ 4 ಮಂದಿ ರೆಡ್ಡಿಗಳಿಗೆ ಅವಕಾಶ ನೀಡಿರುವುದರಿಂದ ರೋಜಾ ಅವರಿಗೂ ಮಂತ್ರಿಗಿರಿ ನೀಡಲು ಸಾಧ್ಯವಾಗಿಲ್ಲ ಎಂದು ವೈಎಸ್ಆರ್ ಕಾಂಗ್ರೆಸ್ ನ ಹಿರಿಯ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಏತನ್ಮಧ್ಯೆ, ಸಚಿವ ಸ್ಥಾನಕ್ಕೆ ಆಕೆಯನ್ನು ಸೇರ್ಪಡೆ ಮಾಡಿಕೊಳ್ಳದಿರುವ ಕಾರಣಗಳನ್ನು ರೋಜಾ ಅವರಿಗೆ ವಿವರಿಸಿರುವ ಜಗನ್ ಮೋಹನ್ ರೆಡ್ಡಿ, ಮಂತ್ರಿಗಿರಿಗೆ ಸಮನಾದ ಸ್ಥಾನ ನೀಡುವ ಭರವಸೆಯಿತ್ತಿದ್ದಾರೆ ಎಂದು ವೈಎಸ್ಆರ್ ಪಿ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com