ಸಿಯಾಚಿನ್ ನಲ್ಲಿ ಯೋಧರ ಸಂಕಷ್ಟ; ಮೊಟ್ಟೆ ಇರಲಿ, ಟೊಮೆಟೋವನ್ನೂ ಕೂಡ ಕತ್ತರಿಸಲು ಸಾಧ್ಯವಿಲ್ಲ!

ಸಿಯಾಚಿನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರ ಆಹಾರ ಪದಾರ್ಥಗಳೂ ಕೂಡ ಮಂಜುಗಡ್ಡೆಯಾಗಿ ಬದಲಾಗಿದ್ದು, ಆಹಾರ ಪದಾರ್ಥಗಳನ್ನು ಕಟ್ ಮಾಡುವ ಸಲುವಾಗಿ ಯೋಧರು ಪಡುತ್ತಿರುವ ಹರಸಾಹಸ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಿಶ್ವದ ಅತ್ಯಂತ ಎತ್ತರದ ಮತ್ತು ಕ್ಲಿಷ್ಟಕರ ಯುದ್ದ ಭೂಮಿ ಸಿಯಾಚಿನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರ ಆಹಾರ ಪದಾರ್ಥಗಳೂ ಕೂಡ ಮಂಜುಗಡ್ಡೆಯಾಗಿ ಬದಲಾಗಿದ್ದು, ಆಹಾರ ಪದಾರ್ಥಗಳನ್ನು ಕಟ್ ಮಾಡುವ ಸಲುವಾಗಿ ಯೋಧರು ಪಡುತ್ತಿರುವ ಹರಸಾಹಸ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಹೌದು... ಸಿಯಾಚಿನ್‌ ರಣಭೂಮಿಯಲ್ಲಿ ಕರ್ತವ್ಯ ನಿರ್ವಹಿಸುವ ಯೋಧರ ಸಂಕಷ್ಟ ವಿವರಿಸುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಡೆಹ್ರಾಡೂನ್ ನ ‘ಇಂಡಿಯನ್ ಮಿಲಿಟರಿ ಅಕಾಡೆಮಿ’ ಪೋಸ್ಟ್ ಮಾಡಿರುವ 2.20 ನಿಮಿಷಗಳ ವಿಡಿಯೊ ತೀವ್ರ ಚಳಿಯಲ್ಲಿ ಬದುಕುವ ಯೋಧರ ಪ್ರತಿಕ್ಷಣದ ಸವಾಲುಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ.
ಸಿಯಾಚಿನ್ ನೀರ್ಗಲ್ಲು ಪ್ರದೇಶದ ಕಾವಲಿಗೆ ನಿಯೋಜನೆಗೊಂಡಿರುವ ಮೂವರು ಯೋಧರು ಶೀತದಿಂದ ಗಟ್ಟಿಯಾದ ಆಹಾರ ಪದಾರ್ಥಗಳನ್ನು ಬಳಸುವ ಸವಾಲಿನ ಬಗ್ಗೆ ಮಾತನಾಡಿದ್ದಾರೆ. ವಿಡಿಯೊ ಆರಂಭದಲ್ಲಿ ಸೈನಿಕರೊಬ್ಬರು ರಿಯಲ್ ಫ್ರೂಟ್‌ ಜ್ಯೂಸ್ ನ ಪೊಟ್ಟಣವೊಂದನ್ನು ತೆಗೆಯಲು ಯತ್ನಿಸುತ್ತಾರೆ. ಸಾಧ್ಯವಾಗದಿದ್ದಾಗ ಅದರ ಮೇಲಿನ ರಟ್ಟಿನ ಕವಚನ್ನು ಹರಿದು ಹಾಕುತ್ತಾರೆ. ಆದರೆ ಒಳಗಿರುವ ಹಣ್ಣಿನ ರಸ ಕೆಂಪು ಇಟ್ಟಿಗೆಯಂತೆ ಗಟ್ಟಿಯಾಗಿರುತ್ತದೆ. ಮತ್ತೋರ್ವ ಯೋಧ ಅದನ್ನು ಸುತ್ತಿಗೆಯಿಂದ ಬಡಿದರೂ, ಹಣ್ಣಿನ ರಸದ ಇಟ್ಟಿಗೆ ಚೂರಾಗುವುದೇ ಇಲ್ಲ.
ಇದಾದ ನಂತರ ಮತ್ತೋರ್ವ ಯೋಧ ಮೊಟ್ಟಗಳನ್ನು ತೋರಿಸುತ್ತಾನೆ. ಮೈನಸ್ 70 ಡಿಗ್ರಿ ತಾಪಮಾನದಲ್ಲಿ ಗಟ್ಟಿ ಕಲ್ಲಿನಂತಾಗಿರುವ ಮೊಟ್ಟೆಗಳನ್ನು ಸುತ್ತಿಗೆಯಿಂದ ಬಡಿದು ಚೂರು ಮಾಡಲು ಯತ್ನಿಸುತ್ತಾರೆ. ಆದರೆ ಮೊಟ್ಟೆ ಒಡೆಯುವುದಿಲ್ಲ. ಅಲ್ಲದೆ ಮೊಟ್ಟೆಯನ್ನು ಕಲ್ಲುಹಾಸಿನ ಮೇಲೆ ಜೋರಾಗಿ ಎಸೆದರೂ ಅದು ಒಡೆಯುಲವುದಿಲ್ಲ. ಬದಲಿಗೆ ಅದು ಎಸೆದಷ್ಟೇ ವೇಗವಾಗಿ ಹಿಂದಕ್ಕೆ ಬಡಿಯುತ್ತೆ. ಮೊಟ್ಟೆಯಷ್ಟೇ ಅಲ್ಲ ಆಹಾರಕ್ಕೆ  ಬಳಕೆ ಮಾಡುವ  ಈರುಳ್ಳಿ, ಟೊಮೆಟಿ, ಶುಂಠಿ ಮತ್ತು ಆಲೂಗಡ್ಡೆ ಹೆಚ್ಚುವುದೂ ಇಷ್ಟೇ ಸಾಹಸದ ಕೆಲಸಗಳಾಗಿರುತ್ತವೆ. ಅವುಗಳ ಪ್ರಾತ್ಯಕ್ಷಿಕೆಯನ್ನೂ ಸೈನಿಕರು ಮಾಡಿ ತೋರಿಸುತ್ತಾರೆ.
ಭಾರತೀಯ ಸೇನೆಯ ಸಿಯಾಚಿನ್‌ ನ ಮೂಲ ನೆಲೆಯು ಸಮುದ್ರಮಟ್ಟದಿಂದ ಸುಮಾರು 6,400 ಮೀಟರ್. ಎತ್ತರದಲ್ಲಿದೆ. ಇದು ವಿಶ್ವದ ಅತಿಶೀತ ಯುದ್ಧಭೂಮಿ. ಶೀತ ಮಾರುತಗಳಿಂದ ಪಾರಾಗಲು ಸೈನಿಕರು ಅನುಕ್ಷಣ ಹೋರಾಡಬೇಕಾದ ಸ್ಥಿತಿ ಇಲ್ಲಿದೆ. ಭೂಕುಸಿತ, ಹಠಾತ್‌ ಹಿಮಪಾತ ಇಲ್ಲಿನ ಬದುಕನ್ನು ಇನ್ನಷ್ಟು ಭೀಕರಗೊಳಿಸಿದೆ. ಇಲ್ಲಿ ಉಷ್ಣಾಂಶ ಮೈನಸ್ 70 ಡಿಗ್ರಿಯಷ್ಟು ಕುಸಿಯುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com