ಕನಿಷ್ಠ ವೇತನ ಕಾಯ್ದೆಯಡಿ ಅಸಂಘಟಿತ ವಲಯ; ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ

ದೇಶದ ಅಪಾರ ಸಂಖ್ಯೆಯಲ್ಲಿ ಕಾರ್ಮಿಕ ವರ್ಗದವರಿಗೆ ಅನುಕೂಲವಾಗಲು ಸರ್ಕಾರ ಸದ್ಯದಲ್ಲಿಯೇ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದ ಅಪಾರ ಸಂಖ್ಯೆಯಲ್ಲಿ ಕಾರ್ಮಿಕ ವರ್ಗದವರಿಗೆ ಅನುಕೂಲವಾಗಲು ಸರ್ಕಾರ ಸದ್ಯದಲ್ಲಿಯೇ ಕಾರ್ಮಿಕ ಕಾನೂನಿಗೆ ಸಂಬಂಧಪಟ್ಟಂತೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆಯಿದೆ.
ಹೊಸ ಮಸೂದೆಯಲ್ಲಿ ಅಸಂಘಟಿತ ವಲಯ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆಯನ್ನು ಜಾರಿಗೆ ತರುವ ಸಾಧ್ಯತೆಯಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಕನಿಷ್ಠ ವೇತನ ಕಾಯ್ದೆ ಕೆಲವು ನಿಶ್ಚಿತ ಉದ್ಯೋಗಗಳಿಗೆ ಮಾತ್ರ ಅನ್ವಯವಾಗುತ್ತದೆ.
ನಿನ್ನೆ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಅಂತರ ಸಚಿವಾಲಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಾರ್ಮಿಕ ಸಚಿವ ಸಂತೋಷ್ ಗಂಗವಾರ್, ವಾಣಿಜ್ಯ ಮತ್ತು ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಹಾಜರಿದ್ದರು.
ಕಾರ್ಮಿಕರ ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸುರಕ್ಷತೆ, ಅಭಿವೃದ್ಧಿ ಮತ್ತು ಕೈಗಾರಿಕೆಗಳ ಸಂಬಂಧಗಳೆಂಬ ನಾಲ್ಕು ವಿಭಾಗಗಳ ಅಡಿಯಲ್ಲಿ 44 ಕಾರ್ಮಿಕ ಕಾನೂನುಗಳು ಉದ್ದೇಶಿತ ಕಾಯ್ದೆಯಡಿ ಒಟ್ಟು ಸೇರಲಿದ್ದು ಇದರಿಂದ ಹೂಡಿಕೆದಾರರಿಗೆ ಮತ್ತು ಬೆಳವಣಿಗೆಯ ವೇಗ ಹೆಚ್ಚಾಗಲಿದೆ. ಹೊಸ ಕಾಯ್ದೆಯಿಂದ ಸರ್ಕಾರ ಕೆಲವು ಹಳೆಯ ಕಾರ್ಮಿಕ ಕಾನೂನನ್ನು ರದ್ದುಪಡಿಸುವ ಸಾಧ್ಯತೆಯಿದೆ.
ಅಸಂಘಟಿತ ವಲಯದ ಮನೆಗೆಲಸ ನೌಕರರು, ನಿರ್ಮಾಣ ವಲಯದ ಕಾರ್ಮಿಕರು, ಕೃಷಿ ಕಾರ್ಮಿಕರು, ಚಿತ್ರೋದ್ಯಮಿಗಳು, ಬೀದಿ ಬದಿ ವ್ಯಾಪಾರಿಗಳು ಮೊದಲಾದವರಿಗೆ ಸಹ ನೂತನ ಕಾರ್ಮಿಕ ಮಸೂದೆಯಿಂದ ಹೆರಿಗೆ ಭತ್ಯೆ ಲಾಭ, ಪಿಂಚಣಿ, ಕನಿಷ್ಠ ವೇತನ, ಆರೋಗ್ಯ ವಿಮೆ, ಎಲ್ಲಾ ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಇತ್ಯಾದಿ ಸೌಲಭ್ಯಗಳು ದೊರೆಯಲಿವೆ.
ಮುಂಬರುವ ಮುಂಗಾರು ಅಧಿವೇಶನದಲ್ಲಿಯೇ ಈ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ. ಹೊಸ ಉದ್ದೇಶಿತ ಕಾರ್ಮಿಕ ಕಾನೂನು ಜಾರಿಗೆ ಸರ್ಕಾರ ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿದೆ ಎಂದು ಕಾರ್ಮಿಕ ಖಾತೆ ಸಚಿವ ಗಂಗವಾರ್ ಸುದ್ದಿಗಾರರಿಗೆ ತಿಳಿಸಿದರು.
ಕೈಗಾರಿಕಾ ವಲಯ ಸುರಕ್ಷತೆ ಮತ್ತು ಅಭಿವೃದ್ಧಿಯಡಿ ಹಲವು ಕೈಗಾರಿಕಾ ಸುರಕ್ಷತೆ ಮತ್ತು ಅಭಿವೃದ್ಧಿ ಕಾನೂನುಗಳನ್ನು ಒಟ್ಟು ಸೇರಿಸಿ ಒಂದೇ ವಿಭಾಗ ಮಾಡುವ ಉದ್ದೇಶ ಕೇಂದ್ರ ಸರ್ಕಾರಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com