
ಮಮತಾ ಬ್ಯಾನರ್ಜಿ
Source : The New Indian Express
ಕೋಲ್ಕತಾ: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಕಳೆದ ಒಂದು ವಾರದಿಂದ ಮುಷ್ಕರ ನಡೆಸುತ್ತಿರುವ ಕಿರಿಯ ವೈದ್ಯರ ಪ್ರತಿನಿಧಿಗಳ ಜೊತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಸಭೆ ನಡೆಸಿದರು.
ಇಂದು ಮಧ್ಯಾಹ್ನ 3 ಗಂಟೆಗೆ ತಮ್ಮಕಚೇರಿಯಲ್ಲಿ ವೈದ್ಯಕೀಯ ಕಾಲೇಜ್ ನ ತಲಾ ಇಬ್ಬರು ಪ್ರತಿನಿಧಿಗಳ ಜತೆ ಕ್ಯಾಮೆರಾ ಸಮ್ಮುಖದಲ್ಲೇ ಸಭೆ ನಡೆಸಿದ ದೀದಿ, ವೈದ್ಯರ ಸುರಕ್ಷತೆಗಾಗಿ ಹೊಸ ಭದ್ರತಾ ನಿಯಮಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
ಮೃತ ರೋಗಿಯ ಸಂಬಂಧಿಗಳು ವೈದ್ಯರ ಮೇಲೆ ಹಲ್ಲೆ ನಡೆಸುವಾಗ ಸ್ಥಳದಲ್ಲಿ ಪೊಲೀಸರು ಇದ್ದರೆ? ಮತ್ತು ಅವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲವೇ? ಎಂದು ಮಮತಾ ಬ್ಯಾನರ್ಜಿ ವೈದ್ಯರನ್ನು ಪ್ರಶ್ನಿಸಿದರು. ಇದಕ್ಕೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ವೈದ್ಯರು ದೂರಿದ್ದಾರೆ.
ವೈದ್ಯರ ಮೇಲೆ ಹಲ್ಲೆ ನಡೆಸಿರುವವರಿಗೆ ಕಠಿಣ ಶಿಕ್ಷಯಾಗಬೇಕು ಮತ್ತು ಅದು ಇತರರಿಗೆ ಪಾಠವಾಗಬೇಕು ಎಂದು ವೈದ್ಯ ಪ್ರತಿನಿಧಿಗಳು ಒತ್ತಾಯಿಸಿದರು.
ನಾವು ಸದಾ ಭಯದಲ್ಲಿಯೇ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ವೈದ್ಯರ ಮೇಲೆ ಹಲ್ಲೆ ನಡೆಸುವವರಿಗೆ ಕಠಿಣ ಶಿಕ್ಷೆಯಾಗುವಂತಹ ಕಾನೂನು ಜಾರಿಗೆ ತರಬೇಕು ಮತ್ತು ನಮಗೆ ಸೂಕ್ತ ಭದ್ರತೆ ನೀಡಬೇಕು ಎಂದು ವೈದ್ಯರು ಆಗ್ರಹಿಸಿದರು.
ವೈದ್ಯರ ಬೇಡಿಕೆ ಆಲಿಸಿದ ಸಿಎಂ, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಭದ್ರತಾ ಸಿಬ್ಬಂದಿ ನಿಯೋಜಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ತುರ್ತು ಸಂದರ್ಭಗಳಲ್ಲಿ ಮಾತ್ರ ರೋಗಿಯ ಇಬ್ಬರು ಸಂಬಂಧಿಗಳಿಗೆ ಅವಕಾಶ ನೀಡಿ ಎಂದು ವೈದ್ಯರಿಗೆ ಸಲಹೆ ನೀಡಿದರು.
ಕೋಲ್ಕತದಲ್ಲಿ ಕಿರಿಯ ವೈದ್ಯರ ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾದ ದುಷ್ಕರ್ಮಿಗಳು ನಡೆಸಿದ ಮಾರಣಾಂತಿಕ ಹಲ್ಲೆಯನ್ನು ಪ್ರತಿಭಟಿಸಿ ವೈದ್ಯ ಸಮುದಾಯ ಒಂದು ವಾರದಿಂದ ಮುಷ್ಕರ ನಡೆಸುತ್ತಿದೆ.
ಗುರುವಾರ ವೈದ್ಯ ಸಮುದಾಯದ ಜತೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೊದಲಿಗೆ ಮುಷ್ಕರ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು. ಬಳಿಕ 4 ಗಂಟೆಗಳ ಗಡುವು ವಿಧಿಸಿ ಅಷ್ಟರೊಳಗೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ವೈದ್ಯ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗಳಿಂದ ತೆರವುಗೊಳಿಸಬೇಕಾದೀತು ಎಂದೂ ಬೆದರಿಕೆಯನ್ನೂ ಒಡ್ಡಿದ್ದರು. ಇದರಿಂದ ವೈದ್ಯ ಸಮುದಾಯ ಮತ್ತಷ್ಟು ಕೆರಳಿ ಪ್ರತಿಭಟನೆ ತೀವ್ರಗೊಳಿಸಿದೆ.
ಪಶ್ಚಿಮ ಬಂಗಾಳದ ವೈದ್ಯ ಸಮುದಾಯಕ್ಕೆ ಬೆಂಬಲ ಸೂಚಿಸಿ ದೇಶಾದ್ಯಂತ ವೈದ್ಯರ ನಾನಾ ಸಂಘಟನೆಗಳು ಇಂದು ಮುಷ್ಕರ ನಡೆಸುತ್ತಿವೆ. ಇದರಿಂದಾಗಿ ಸಾಮಾನ್ಯ ಆರೋಗ್ಯ ಪಾಲನೆ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.
Stay up to date on all the latest ರಾಷ್ಟ್ರೀಯ news