ಸಿಎಂ ಮಮತಾ ಬ್ಯಾನರ್ಜಿ ಭೇಟಿ ಬಳಿಕ ಮುಷ್ಕರ ಹಿಂಪಡೆದ ಕಿರಿಯ ವೈದ್ಯರು

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಕಳೆದ ಒಂದು ವಾರದಿಂದ ಮುಷ್ಕರ ನಡೆಸುತ್ತಿರುವ ಸರ್ಕಾರಿ ಕಿರಿಯ ವೈದ್ಯರು ಸೋಮವಾರ ಪಶ್ಚಿಮ ಬಂಗಾಳ...
ಮುಷ್ಕರನಿರತ ವೈದ್ಯರು
ಮುಷ್ಕರನಿರತ ವೈದ್ಯರು
ಕೋಲ್ಕತಾ: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಕಳೆದ ಒಂದು ವಾರದಿಂದ ಮುಷ್ಕರ ನಡೆಸುತ್ತಿದ್ದ ಸರ್ಕಾರಿ ಕಿರಿಯ ವೈದ್ಯರು ಜೊತೆ ಸೋಮವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಡೆಸಿದ ಸಭೆ ಯಶಸ್ವಿಯಾಗಿದ್ದು, ಕಿರಿಯ ವೈದ್ಯರು ಮುಷ್ಕರ ಹಿಂಪಡೆದಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಗೆ ತಮ್ಮಕಚೇರಿಯಲ್ಲಿ ವೈದ್ಯಕೀಯ ಕಾಲೇಜ್ ನ ತಲಾ ಇಬ್ಬರು ಪ್ರತಿನಿಧಿಗಳ ಜತೆ ಕ್ಯಾಮೆರಾ ಸಮ್ಮುಖದಲ್ಲೇ ಸಭೆ ನಡೆಸಿದ ದೀದಿ, ವೈದ್ಯರ ಸುರಕ್ಷತೆಗಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವಂತೆ ಪೊಲೀಸರಿಗೆ ಸೂಚಿಸಿದರು.
ಮುಖ್ಯಮಂತ್ರಿಗಳ ಮುಂದೆ ತಮ್ಮ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಂಡ ವೈದ್ಯರು, ತಮಗೆ ಸುರಕ್ಷತೆಯ ಬಗ್ಗೆ ಆತಂಕ ಇದೆ ಎಂದು ಹೇಳಿದ್ದರು.
ಸಭೆಯಲ್ಲಿ 31 ವೈದ್ಯ ಪ್ರತಿನಿಧಿಗಳು ಹಾಗೂ ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆ ಕಾರ್ಯದರ್ಶಿ ಚಂದ್ರಿಮಾ ಭಟ್ಟಾಚಾರ್ಯ ಮತ್ತು ಇತರೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ವೈದ್ಯರ ಮೇಲೆ ಹಲ್ಲೆ ನಡೆಸಿರುವವರಿಗೆ ಕಠಿಣ ಶಿಕ್ಷಯಾಗಬೇಕು ಮತ್ತು ಅದು ಇತರರಿಗೆ ಪಾಠವಾಗಬೇಕು ಎಂದು ವೈದ್ಯ ಪ್ರತಿನಿಧಿಗಳು ಒತ್ತಾಯಿಸಿದರು. 
ನಾವು ಸದಾ ಭಯದಲ್ಲಿಯೇ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ವೈದ್ಯರ ಮೇಲೆ ಹಲ್ಲೆ ನಡೆಸುವವರಿಗೆ ಕಠಿಣ ಶಿಕ್ಷೆಯಾಗುವಂತಹ ಕಾನೂನು ಜಾರಿಗೆ ತರಬೇಕು ಮತ್ತು ನಮಗೆ ಸೂಕ್ತ ಭದ್ರತೆ ನೀಡಬೇಕು ಎಂದು ವೈದ್ಯರು ಆಗ್ರಹಿಸಿದರು.
ವೈದ್ಯರ ಬೇಡಿಕೆ ಆಲಿಸಿದ ಸಿಎಂ, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಭದ್ರತಾ ಸಿಬ್ಬಂದಿ ನಿಯೋಜಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ತುರ್ತು ಸಂದರ್ಭಗಳಲ್ಲಿ ಮಾತ್ರ ರೋಗಿಯ ಇಬ್ಬರು ಸಂಬಂಧಿಗಳಿಗೆ ಅವಕಾಶ ನೀಡಿ ಎಂದು ವೈದ್ಯರಿಗೆ ಸಲಹೆ ನೀಡಿದರು.
ಕೋಲ್ಕತದಲ್ಲಿ ಕಿರಿಯ ವೈದ್ಯರ ಮೇಲೆ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಎನ್ನಲಾದ ದುಷ್ಕರ್ಮಿಗಳು ನಡೆಸಿದ ಮಾರಣಾಂತಿಕ ಹಲ್ಲೆಯನ್ನು ಪ್ರತಿಭಟಿಸಿ ವೈದ್ಯ ಸಮುದಾಯ ಒಂದು ವಾರದಿಂದ ಮುಷ್ಕರ ನಡೆಸುತ್ತಿದೆ. 
ಗುರುವಾರ ವೈದ್ಯ ಸಮುದಾಯದ ಜತೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೊದಲಿಗೆ ಮುಷ್ಕರ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು. ಬಳಿಕ 4 ಗಂಟೆಗಳ ಗಡುವು ವಿಧಿಸಿ ಅಷ್ಟರೊಳಗೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ವೈದ್ಯ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗಳಿಂದ ತೆರವುಗೊಳಿಸಬೇಕಾದೀತು ಎಂದೂ ಬೆದರಿಕೆಯನ್ನೂ ಒಡ್ಡಿದ್ದರು. ಇದರಿಂದ ವೈದ್ಯ ಸಮುದಾಯ ಮತ್ತಷ್ಟು ಕೆರಳಿ ಪ್ರತಿಭಟನೆ ತೀವ್ರಗೊಳಿಸಿದ್ದರು.
ಪಶ್ಚಿಮ ಬಂಗಾಳದ ವೈದ್ಯ ಸಮುದಾಯಕ್ಕೆ ಬೆಂಬಲ ಸೂಚಿಸಿ ದೇಶಾದ್ಯಂತ ವೈದ್ಯರ ನಾನಾ ಸಂಘಟನೆಗಳು ಇಂದು ಮುಷ್ಕರ ನಡೆಸಿದವು. ಇದರಿಂದಾಗಿ ಸಾಮಾನ್ಯ ಆರೋಗ್ಯ ಪಾಲನೆ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com