ಕೊನೆಗೂ ದೀದಿ ಸಂಧಾನ ಸಫಲ: ವೈದ್ಯರ ರಕ್ಷಣೆಗೆ 10 ಭದ್ರತಾ ಅಂಶಗಳಿಗೆ ಸಮ್ಮತಿ ಸೂಚಿಸಿದ ದೀದಿ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಮುಷ್ಕರ ನಿರತ ಕಿರಿಯ ವೈದ್ಯರ ನಡುವೆ ಸೋಮವಾರ ನಡೆದ ಸಂಧಾನ ಕೊನೆಗೂ ಸಫಲವಾಗಿದ್ದು, ಪ್ರತಿಭಟನೆ ಕೈ ಬಿಟ್ಟು ಸೇವೆಗಳಿಗೆ ಹಾಜರಾಗಲು ವೈದ್ಯರು ಸಮ್ಮತಿ ಸೂಚಿಸಿದ್ದಾರೆ.

Published: 18th June 2019 12:00 PM  |   Last Updated: 18th June 2019 08:24 AM   |  A+A-


West Bengal Doctors End Strike After Meeting With Mamata Banerjee

ಸಂಗ್ರಹ ಚಿತ್ರ

Posted By : SVN SVN
Source : Online Desk
ಕೋಲ್ಕತ್ತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಮುಷ್ಕರ ನಿರತ ಕಿರಿಯ ವೈದ್ಯರ ನಡುವೆ ಸೋಮವಾರ ನಡೆದ ಸಂಧಾನ ಕೊನೆಗೂ ಸಫಲವಾಗಿದ್ದು, ಪ್ರತಿಭಟನೆ ಕೈ ಬಿಟ್ಟು ಸೇವೆಗಳಿಗೆ ಹಾಜರಾಗಲು ವೈದ್ಯರು ಸಮ್ಮತಿ ಸೂಚಿಸಿದ್ದಾರೆ.

ಆ ಮೂಲಕ ಪಶ್ಚಿಮ ಬಂಗಾಳದಲ್ಲಿ ಕಳೆದೊಂದು ವಾರದಿಂದ ಉಂಟಾಗಿದ್ದ ಅನಿಶ್ಚಿತತೆಗೆ ತೆರಬಿದ್ದಿದ್ದು, ರೋಗಿಗಳು ನಿರಾಳರಾಗಿದ್ದಾರೆ. ನಿನ್ನೆ ನಡೆದ ಸಂಧಾನ ಸಭೆಯಲ್ಲಿ ವೈದ್ಯರಿಗೆ ಭದ್ರತೆಯೂ ಸೇರಿದಂತೆ ವೈದ್ಯರು ಮುಂದಿಟ್ಟಿದ್ದ ಎಲ್ಲ ಬೇಡಿಕೆಗಳ ಈಡೇರಿಕೆ ಕುರಿತು ಸಿಎಂ ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಸಂಧಾನ ಸಭೆ ಬಳಿಕ ಮಾತನಾಡಿದ ಮಮತಾ ಬ್ಯಾನರ್ಜಿ, ‘ಕಾರ್ಯಸ್ಥಳದಲ್ಲಿ ಭದ್ರತೆ ಒದಗಿಸುವುದು ಸೇರಿ ವೈದ್ಯರ ಎಲ್ಲಾ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ’ ಎಂದು ವೈದ್ಯರಿಗೆ ಭರವಸೆ ನೀಡಿದ್ದಾರೆ. 

ವೈದ್ಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ದೂರು ಪರಿಹಾರ ಘಟಕವನ್ನು ಸ್ಥಾಪಿಸಬೇಕು ಎಂಬ ಬೇಡಿಕೆಗೂ ಮುಖ್ಯಮಂತ್ರಿ ಒಪ್ಪಿದರು. ವೈದ್ಯರ ಬೇಡಿಕೆಯಂತೆ ಮಾಧ್ಯಮಗಳ ಉಪಸ್ಥಿತಿಯಲ್ಲಿಯೇ ಸಭೆ ನಡೆಯಿತು. ಮುಷ್ಕರನಿರತರು ಪಟ್ಟುಹಿಡಿದಂತೆ, ಮುಖ್ಯಮಂತ್ರಿ ಹಾಗೂ ವೈದ್ಯ ಪ್ರತಿನಿಧಿಗಳ ನಡುವಿನ ಸಂಧಾನ ಸಭೆಯ ಕಲಾಪವನ್ನು ವೈದ್ಯರು ವೀಕ್ಷಿಸಲು ಅನುವಾಗುವಂತೆ ನೇರಪ್ರಸಾರ ಮಾಡಲಾಯಿತು. ಸಭೆಯ ನಂತರ, ಸಹೋದ್ಯೋಗಿಗಳು ಧರಣಿ ನಡೆಸುತ್ತಿದ್ದ ಎನ್‌ಆರ್‌ಎಸ್‌ ವೈದ್ಯಕೀಯ ಕಾಲೇಜು ಆವರಣಕ್ಕೆ ಮರಳಿದ ವೈದ್ಯ ಪ್ರತಿನಿಧಿಗಳು ಮುಷ್ಕರ ಅಂತ್ಯಗೊಳಿಸುವ ನಿರ್ಧಾರವನ್ನು ಪ್ರಕಟಿಸಿದರು.

ವೈದ್ಯರ ರಕ್ಷಣೆಗೆ 10 ಭದ್ರತಾ ಅಂಶಗಳಿಗೆ ಸಮ್ಮತಿ 
ಆಸ್ಪತ್ರೆಗಳಲ್ಲಿ ರೋಗಿಗಳ ಸಂಬಂಧಿಕರು ವೈದ್ಯರ ಮೇಲೆ ನಡೆಸುವ ಹಲ್ಲೆ ತಡೆಗಟ್ಟಿ ರಕ್ಷಣೆ ಒದಗಿಸಲು 10 ಭದ್ರತಾ ಅಂಶಗಳ ಸಲಹೆಗೆ ಸಿಎಂ ಮಮತಾ ಬ್ಯಾನರ್ಜಿ ಸಮ್ಮತಿ ಸೂಚಿಸಿದ್ದಾರೆ. ವೈದ್ಯಕೀಯ ಸ್ಥಾಪನಾ ಕಾಯ್ದೆಗೆ ತಿದ್ದುಪಡಿ ಮತ್ತು ಇದನ್ನು ವಿಧಾನಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಪ್ರತಿಯೊಂದು ಆಸ್ಪತ್ರೆಗಳಲ್ಲಿ ಕುಂದುಕೊರತೆ ಘಟಕ ಸ್ಥಾಪಿಸುವ ಬೇಡಿಕೆ ಈಡೇರಿಕೆಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಮಮತಾ ಹೇಳಿದ್ದಾರೆ. ಅಂತೆಯೇ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಚಿಕಿತ್ಸೆ ಬಗ್ಗೆ ಅತೃಪ್ತಿ ಇದ್ದರೆ ಈ ಕುರಿತು ದೂರು ದಾಖಲಿಸುವ ಘಟಕ ಸ್ಥಾಪನೆ ಸೇರಿದಂತೆ ಅನೇಕ ಅಂಶಗಳನ್ನು ಕಿರಿಯ ವೈದ್ಯರ ಬೇಡಿಕೆ ಈಡೇರಿಸಲು ಸಿಎಂ ಮಮತಾ ಒಪ್ಪಿಗೆ ಸೂಚಿಸಿದ್ದಾರೆ. ವೈದ್ಯರ ರಕ್ಷಣೆಗಾಗಿ ನಿರ್ದೇಶನ ಮಾಡಲು  ಎಲ್ಲ ಆಸ್ಪತ್ರೆಗಳಲ್ಲಿ ಪೊಲೀಸ್​ ಇಲಾಖೆಯ ಒಬ್ಬರನ್ನು ನೋಡಲ್​ ಅಧಿಕಾರಿಗಳನ್ನು ನೇಮಕ ಮಾಡಲಾಗುವುದ. ಜೊತೆಗೆ ವೈದ್ಯರ ಮೇಲೆ ಸುಳ್ಳು ದೂರು ದಾಖಲಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp