ಬಿಜೆಪಿ ಶಾಸಕ ರಾಜಾ ಸಿಂಗ್ ರಿಂದ ಸ್ವಯಂ ಪ್ರೇರಿತ ಗಾಯ: ಹೈದರಾಬಾದ್ ಪೊಲೀಸರು

ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್‌ ಅವರು ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಹೈದರಾಬಾದ್....
ರಾಜಾ ಸಿಂಗ್
ರಾಜಾ ಸಿಂಗ್
ಹೈದರಾಬಾದ್: ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್‌ ಅವರು ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಹೈದರಾಬಾದ್ ಪೊಲೀಸರು, ಶಾಸಕರು ತಾವೇ ಸ್ವಯಂ ಪ್ರೇರಿತರಾಗಿ ಗಾಯ ಮಾಡಿಕೊಂಡಿದ್ದಾರೆ ಎಂದು ಗುರುವಾರ ಹೇಳಿದ್ದಾರೆ.
ನಿನ್ನೆ ತಡ ರಾತ್ರಿ ರಾಜಾ ಸಿಂಗ್ ಅವರು ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅವಂತಿ ಬಾಯಿ ಲೋಧ್‌ ಅವರ ಪ್ರತಿಮೆ ಪುನರ್‌ ಸ್ಥಾಪನೆಗಾಗಿ ಬೆಂಬಲಿಗರೊಂದಿಗೆ ತೆರಳಿದ ವೇಳೆ ಪೊಲೀಸರೊಂದಿಗೆ ಜಟಾಪಟಿ ನಡೆದಿತ್ತು. ಈ ವೇಳೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ನಲ್ಲಿ ಶಾಸಕರು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.
ರಾಜಾ ಸಿಂಗ್ ಅವರು ಗ್ರಾನೈಟ್ ಕಲ್ಲಿನಿಂದ ತಮ್ಮ ತಲೆಗೆ ಜಜ್ಜಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅವರ ಈ ಕೃತ್ಯದಿಂದ ಶಾಸಕರ ತಲೆಗೆ ಗಾಯವಾಗಿದೆ. ಅಲ್ಲಿ ಯಾವುದೇ ಲಾಠಿ ಚಾರ್ಜ್ ನಡೆದಿಲ್ಲ. ಒಂದು ವೇಳೆ ಲಾಠಿ ಚಾರ್ಜ್ ನಡೆದಿದ್ದರೆ ಬೇರೆಯವರಿಗೂ ಗಾಯವಾಗಬೇಕಿತ್ತು ಎಂದು ಉಪ ಪೊಲೀಸ್ ಆಯುಕ್ತ ಎಆರ್ ಶ್ರೀನಿವಾಸ್ ಅವರು ಹೇಳಿದ್ದಾರೆ.
ಪ್ರತಿಮೆ ಪುನರ್‌ ಸ್ಥಾಪನೆಗೆ ಹೈದರಾಬಾದ್ ಮಹಾನಗರ ಪಾಲಿಕೆಯಿಂದ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಅದನ್ನು ತಡೆಯಲು ಪೊಲೀಸರು ಯತ್ನಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜುಮೀರತ್‌ ಬಜಾರ್‌ನಲ್ಲಿ 2009 ರಲ್ಲಿ ಮೂರ್ತಿ ಸ್ಥಾಪಿಸಲಾಗಿತ್ತು, ಆದರೆ ಎರಡು ಬಾರಿ ಹಾನಿಯಾದ ಹಿನ್ನಲೆಯಲ್ಲಿ ಅದನ್ನು ತೆರವುಗೊಳಿಸಲಾಗಿತ್ತು.
ರಾಜಾ ಸಿಂಗ್ ಅವರು ಸುಮಾರು 200 ಬೆಂಬಲಿಗರೊಂದಿಗೆ ಪ್ರತಿಮೆಯನ್ನು ಪುನರ್‌ ಸ್ಥಾಪಿಸಲು ತೆರಳಿದಾಗ ಪೊಲೀಸರು ಅದನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಶಾಸಕರ ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ.
ಪೊಲೀಸರ ವರ್ತನೆಯಿಂದ ಆಕ್ರೋಶಗೊಂಡ ರಾಜಾ ಸಿಂಗ್ ಅವರು ತಮ್ಮ ಕೈಯಲ್ಲಿದ್ದ ಕಲ್ಲಿನಿಂದ ತಲೆಗೆ ಬಡಿದುಕೊಂಡ ಪರಿಣಾಮ ತಲೆ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಅವರನ್ನು ಓಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಯ ಬಳಿಕ ಇಂದು  ಬೆಳಗ್ಗೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com