ಅಖಿಲೇಶ್ ಮುಸ್ಲಿಂ ವಿರೋಧಿ, ಮುಲಾಯಂ ಸಿಂಗ್ ಬಿಜೆಪಿ ಜೊತೆ ಸೇರಿ ಒಳಸಂಚು ನಡೆಸುತ್ತಾರೆ: ಮಾಯಾವತಿ ಗಂಭೀರ ಆರೋಪ

ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮುರಿದುಕೊಂಡ ನಂತರ ಅದರ ಅಧ್ಯಕ್ಷ ಅಖಿಲೇಶ್ ಯಾದವ್ ...

Published: 24th June 2019 12:00 PM  |   Last Updated: 24th June 2019 02:53 AM   |  A+A-


BSP leader Mayawati

ಬಿಎಸ್ಪಿ ನಾಯಕಿ ಮಾಯಾವತಿ

Posted By : SUD SUD
Source : IANS
ಲಕ್ನೊ: ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮುರಿದುಕೊಂಡ ನಂತರ ಅದರ ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ ಬಿಎಸ್ಪಿ ನಾಯಕಿ ಮಾಯಾವತಿ, ಅಖಿಲೇಶ್ ಯಾದವ್ ಮುಸಲ್ಮಾನರ ವಿರೋಧಿ ಎಂದು ಆರೋಪಿಸಿದ್ದಾರೆ.

ರಾಜಕೀಯ ಧ್ರುವೀಕರಣವಾಗಬಹುದು ಎಂದು ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡದಂತೆ ಅಖಿಲೇಶ್ ಯಾದವ್ ತಮ್ಮನ್ನು ತಡೆದರು. ಆದರೆ ನಾನು ಅವರ ಮಾತುಗಳನ್ನು ಕೇಳಲಿಲ್ಲ. ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದಾಗ ಯಾದವೇತರರಿಗೆ ಮತ್ತು ದಲಿತರಿಗೆ ಅನ್ಯಾಯ ಮಾಡಿದ್ದು ಇದರಿಂದಾಗಿ ಕಳೆದ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷಕ್ಕೆ ಈ ಸಮಾಜದ ಜನರು ಮತ ನೀಡಲಿಲ್ಲ. ದಲಿತರ ಅಭಿವೃದ್ಧಿಗೆ ಕೂಡ ಎಸ್ಪಿ ಅಡ್ಡಗಾಲು ಹಾಕುತ್ತಿದೆ ಎಂದು ಬಹುಜನ ಸಮಾಜವಾದಿ ಪಕ್ಷದ ಸಭೆಯಲ್ಲಿ ಇಂದು ಮಾಯಾವತಿ ಆರೋಪಿಸಿದ್ದಾರೆ.

ಸಭೆಯ ನಂತರ ಪಕ್ಷ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ಈ ಮಾತುಗಳು ಇರಲಿಲ್ಲ. ಆದರೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಮಾಯಾವತಿಯವರು ಎಸ್ಪಿ ವಿರುದ್ಧ ಹರಿಹಾಯ್ದಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಎಸ್ಪಿ ಟಿಕೆಟ್ ನಿಂದ ಸ್ಪರ್ಧಿಸಿ ಗೆದ್ದ ಸಂಸದರಲ್ಲಿ ಮೂವರು ಮುಸ್ಲಿಂ ನಾಯಕರಾಗಿದ್ದಾರೆ. ಮೊಹಮ್ಮದ್ ಅಜಂ ಖಾನ್, ಶಫಿಖುರ್ ರೆಹಮಾನ್ ಮತ್ತು ಎಸ್ ಟಿ ಹಸನ್.

ಅಷ್ಟಕ್ಕೇ ಸುಮ್ಮನಾಗದ ಮಾಯಾವತಿಯವರು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ವಿರುದ್ಧ ಕೂಡ ಹರಿಹಾಯ್ದಿದ್ದು ಅವರು ಬಿಜೆಪಿ ಜೊತೆ ಒಳಸಂಚು ನಡೆಸುತ್ತಿದ್ದು ತಮ್ಮನ್ನು ತಾಜ್ ಕಾರಿಡಾರ್ ಕೇಸಿನಲ್ಲಿ ಸಿಕ್ಕಿಸಿ ಹಾಕಲು ನೋಡುತ್ತಿದ್ದಾರೆ ಎಂದು ಆರೋಪಿಸಿದರು. 

ಲೋಕಸಭೆ ಚುನಾವಣೆಯ ಮತ ಎಣಿಕೆ ದಿನ ತಾನು ಅಖಿಲೇಶನ್ನು ಕರೆದರೂ ಕೂಡ ಅವರು ತಮ್ಮ ಕರೆಯನ್ನು ಸ್ವೀಕರಿಸಲಿಲ್ಲ. ನನ್ನ ಪಕ್ಷದ ಕಾರ್ಯಕರ್ತರು ಎಲ್ಲಿ ಬೆಂಬಲ ನೀಡಲಿಲ್ಲ ಎಂದು ಕರೆದು ಕುಳಿತು ಮಾತನಾಡಬಹುದಾಗಿತ್ತು, ಆ ಕೆಲಸ ಮಾಡಲಿಲ್ಲ, ವಿಧಾನಸಭೆ ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸುವ ಬಗ್ಗೆ ತಮ್ಮಲ್ಲಿ ಹೇಳದೆ ಬಿಎಸ್ಪಿ ನಾಯಕ ಸತೀಶ್ ಚಂದ್ರ ಮಿಶ್ರಾ ಅವರಲ್ಲಿ ಹೇಳಿದ್ದಾರೆ ಅಖಿಲೇಶ್ ಎಂದು ಕೂಡ ಸಭೆಯಲ್ಲಿ ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ.

ಉಪ ಚುನಾವಣೆಯಲ್ಲಿ ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಾಯಾವತಿ ಘೋಷಿಸಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp