ಕಳೆದ 5 ವರ್ಷಗಳಲ್ಲಿ ದೇಶ ದೊಡ್ಡ ತುರ್ತು ಪರಿಸ್ಥಿತಿ ಎದುರಿಸಿದೆ; ಪ್ರಧಾನಿ ವಿರುದ್ಧ ಮಮತಾ ಬ್ಯಾನರ್ಜಿ ಟೀಕೆ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಹರಿಹಾಯ್ದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ...

Published: 25th June 2019 12:00 PM  |   Last Updated: 25th June 2019 12:26 PM   |  A+A-


Mamata Banerjee

ಮಮತಾ ಬ್ಯಾನರ್ಜಿ

Posted By : SUD SUD
Source : ANI
ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಹರಿಹಾಯ್ದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳೆದ 5 ವರ್ಷಗಳಲ್ಲಿ ದೇಶ ದೊಡ್ಡ ತರ್ತು ಪರಿಸ್ಥಿತಿಯನ್ನು ಕಂಡಿತ್ತು ಎಂದು ಟೀಕಿಸಿದ್ದಾರೆ.

ಇಂದು, 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಘೋಷಿಸಿದ್ದ ತುರ್ತು ಪರಿಸ್ಥಿತಿಯ ವಾರ್ಷಿಕೋತ್ಸವ ದಿನವಾಗಿದೆ. ಕಳೆದ 5 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಕೂಡ ದೊಡ್ಡ ತುರ್ತುಪರಿಸ್ಥಿತಿಯನ್ನು ನಾವೆಲ್ಲಾ ಎದುರಿಸಿದ್ದೇವೆ. ಇತಿಹಾಸದಿಂದ ಪಾಠ ಕಲಿತು ನಾವು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾಗಿದೆ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಆರಂಭದಿಂದಲೂ ಬಿಜೆಪಿಯ ಕಾರ್ಯವೈಖರಿ, ಯೋಜನೆಗಳನ್ನು ವಿರೋಧಿಸುತ್ತಲೇ ಬಂದಿರುವ ತೃಣಮೂಲ ಕಾಂಗ್ರೆಸ್ ಕಳೆದ ವಾರ ದೆಹಲಿಯಲ್ಲಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲಿಲ್ಲ. ಮೋದಿ-2 ಸರ್ಕಾರದ ಪ್ರಮಾಣವಚನ ಕಾರ್ಯಕ್ರಮಕ್ಕೆ ಮತ್ತು ಜೂನ್ 15ರಂದು ನಡೆದ ನೀತಿ ಆಯೋಗ ಸಭೆಗೆ ಕೂಡ  ಮಮತಾ ಬ್ಯಾನರ್ಜಿ ಗೈರಾಗಿದ್ದರು. 

1975ರ ಜೂನ್ 25ರಂದು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಘೋಷಿಸಿದ್ದ ತುರ್ತು ಪರಿಸ್ಥಿತಿಗೆ 44ನೇ ವರ್ಷವಾಗಿದೆ. 1975ರಿಂದ 1977ರವರೆಗೆ 19 ತಿಂಗಳು ನಮ್ಮ ದೇಶ ತುರ್ತು ಪರಿಸ್ಥಿತಿ ಎದುರಿಸಿತ್ತು. ನಂತರ 1977ರ ಮಾರ್ಚ್ 21ರಂದು ಹಿಂತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಚುನಾವಣೆಯನ್ನು ರದ್ದುಪಡಿಸಿ ನಾಗರಿಕ ಸ್ವಾತಂತ್ರ್ಯಗಳನ್ನು ಹತ್ತಿಕ್ಕಲಾಗಿತ್ತು. ಸ್ವತಂತ್ರ ಭಾರತದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ವಿವಾದಿತ ಸಮಯವಾಗಿತ್ತು.

ಈ ಸಂದರ್ಭವನ್ನು ಪ್ರಧಾನಿ ಮೋದಿಯವರು ಕೂಡ ಇಂದು ಸ್ಮರಿಸಿದ್ದು, ತುರ್ತು ಪರಿಸ್ಥಿತಿಯನ್ನು ಉಗ್ರವಾಗಿ ಮತ್ತು ಧೈರ್ಯವಾಗಿ ವಿರೋಧಿಸಿದವರು ನಿಜಕ್ಕೂ ಪ್ರಶಂಸನೀಯರು. ಭಾರತದ ಪ್ರಜಾಪ್ರಭುತ್ವದ ನೀತಿಗಳು ಸರ್ವಾಧಿಕಾರಿ ಮನಸ್ಥಿತಿಯ ಮೇಲೆ ಯಶಸ್ವಿಯಾಗಿ ಮೇಲುಗೈ ಸಾಧಿಸಿದವು ಎಂದು ಸ್ಮರಿಸಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp