ಈ ಕಚೋರಿ ಮಾರಾಟಗಾರನ ವಾರ್ಷಿಕ ಆದಾಯ 60 ಲಕ್ಷದಿಂದ 1 ಕೋಟಿ ರೂ.!

ಉತ್ತರ ಪ್ರದೇಶದ ಅಲಿಗಢದಲ್ಲಿ ಕಚೋರಿ ಮಾರುವ ಒಬ್ಬ ಸಾಮಾನ್ಯ ವ್ಯಕ್ತಿಯ ವಾರ್ಷಿಕ ಆದಾಯ ಕಂಡು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳೇ ದಂಗಾಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಅಲಿಗಢ: ಉತ್ತರ ಪ್ರದೇಶದ ಅಲಿಗಢದಲ್ಲಿ ಕಚೋರಿ ಮಾರುವ ಒಬ್ಬ ಸಾಮಾನ್ಯ ವ್ಯಕ್ತಿಯ  ವಾರ್ಷಿಕ ಆದಾಯ ಕಂಡು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ.
ಮುಕೇಶ್ ಕಚೋರಿ ಎಂದೇ ಖ್ಯಾತಿ ಪಡೆದಿರುವ ಸೀಮಾ ಸಿನಿಮಾ ಹಾಲ್ ಹತ್ತಿರವೇ ಇರುವ ಈ ಮಳಿಗೆ ಮಾಲೀಕ ಮುಕೇಶ್ ಅವರು ವರ್ಷಕ್ಕೆ 60 ಲಕ್ಷ ರು. ದಿಂದ 1 ಕೋಟಿ ರು.ವರೆಗೆ ಸಂಪಾದನೆ ಮಾಡುತ್ತಾರೆ.
ಮುಕೇಶ್ ಅವರು ಸಮೋಸಾ, ಕಚೋರಿಯನ್ನು ಮಾರಲು ಬೆಳಗ್ಗೆ ಆರಂಭಿಸಿದರೆ, ರಾತ್ರಿಯ ತನಕ ಮಾರುತ್ತಲೇ ಇರುತ್ತಾರೆ. ಮಳಿಗೆಯ ಮುಂದಿನ ಸರತಿ ಸಾಲು ಮಾತ್ರ ಕರಗುವುದಿಲ್ಲ. ಈಚೆಗೆ ವಾಣಿಜ್ಯ ತೆರಿಗೆ ಇಲಾಖೆಯ ಬಳಿ ಮುಕೇಶ್ ಅವರ ಮಳಿಗೆ ವಿರುದ್ಧ ದೂರು ದಾಖಲಿಸುವ ತನಕ ಎಲ್ಲವೂ ಸರಿಯೇ ಇತ್ತು. ಇದೀಗ ಮುಕೇಶ್ ಗೆ ನೋಟಿಸ್ ನೀಡಲಾಗಿದೆ. ಏಕೆಂದರೆ ಆತ ಜಿಎಸ್ ಟಿ ಅಡಿಯಲ್ಲಿ ನೋಂದಣಿ ಮಾಡಿಕೊಂಡಿರಲಿಲ್ಲ. ಯಾವುದೇ ತೆರಿಗೆ ಪಾವತಿ ಮಾಡುತ್ತಿರಲಿಲ್ಲ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮುಕೇಶ್ ಅವರು, ನನಗೆ ಇವ್ಯಾವೂ ಗೊತ್ತಿರಲಿಲ್ಲ. ಕಳೆದ ಹನ್ನೆರಡು ವರ್ಷದಿಂದ ಅಂಗಡಿ ನಡೆಸುತ್ತಾ ಇದ್ದೀನಿ. ಈ ಎಲ್ಲ ನಿಯಮಗಳನ್ನು ಅನುಸರಿಸಬೇಕು ಎಂಬುದನ್ನು ಯಾರೂ ನನಗೆ ಹೇಳಿಲ್ಲ. ಜೀವನಕ್ಕಾಗಿ ಕಚೋರಿ, ಸಮೋಸಾ ಮಾರುತ್ತಾ ಬದುಕುತ್ತಿರುವ ಸಾಮಾನ್ಯ ಜನ ನಾವು ಎನ್ನುತ್ತಾರೆ. 
ಮುಕೇಶ್ ಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಅವರು ತಮ್ಮ ಆದಾಯದ ಬಗ್ಗೆ ಒಪ್ಪಿಕೊಂಡಿದ್ದಾರೆ. ಕಚೋರಿ- ಸಮೋಸಾಗೆ ಬೇಕಾಗುವ ಪದಾರ್ಥ, ಎಣ್ಣೆ, ಎಲ್ ಪಿಜಿ ಸಿಲಿಂಡರ್ ಗಳು ಇತ್ಯಾದಿ ಖರ್ಚಿನ ಮಾಹಿತಿಯನ್ನೂ ನೀಡಿದ್ದಾರೆ ಎಂದು ಪ್ರಕರಣದ ತನಿಖೆಯ ಭಾಗವಾಗಿರುವ ರಾಜ್ಯ ಗುಪ್ತಚರ ಇಲಾಖೆ ಸದಸ್ಯರೊಬ್ಬರು ತಿಳಿಸಿದ್ದಾರೆ.
ಯಾವುದೇ ವ್ಯಾಪಾರದಲ್ಲಾಗಲೀ 40 ಲಕ್ಷ ಮತ್ತು ಮೇಲ್ಪಟ್ಟ ವಹಿವಾಟು ಇದ್ದಲ್ಲಿ ಜಿಎಸ್ ಟಿ ನೋಂದಣಿ ಮಾಡಿಸುವುದು ಕಡ್ಡಾಯ. ತಯಾರಾದ ಆಹಾರ ಪದಾರ್ಥದ ಮೇಲೆ ಶೇ. 5 ರಷ್ಟು ತೆರಿಗೆ ಬೀಳುತ್ತದೆ. ಅಧಿಕಾರಿಗಳು ಹೇಳುವ ಪ್ರಕಾರ, ಮುಕೇಶ್ ಜಿಎಸ್ ಟಿ ನೋಂದಣಿ ಮಾಡಿಸಬೇಕು ಹಾಗೂ ಒಂದು ವರ್ಷದ ತೆರಿಗೆ ಪಾವತಿಸಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com