ಅಭಿವೃದ್ಧಿ ಕಾರ್ಯಕ್ಕೆ ರಾಜ್ಯಸಭೆ ಅಡ್ಡಿ; ಪ್ರಧಾನಿ ಹೇಳಿಕೆ ಹಿಂಪಡೆಯಬೇಕು: ಕಾಂಗ್ರೆಸ್ ಒತ್ತಾಯ

ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯಸಭೆ ಅಡ್ಡಿಪಡಿಸಿತು ಎಂಬ ಪ್ರಧಾನಿ ನರೇಂದ್ರ ಮೋದಿ....
ಆನಂದ್ ಶರ್ಮಾ
ಆನಂದ್ ಶರ್ಮಾ
ನವದೆಹಲಿ: ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯಸಭೆ ಅಡ್ಡಿಪಡಿಸಿತು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್, ಪ್ರಧಾನಿ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ ಅವರು, ರಾಜ್ಯಸಭೆ ಅಭಿವೃದ್ಧಿಗೆ ಅಡ್ಡಿಪಡಿಸುವ ಸದನ ಎಂದು ಕರೆದಿರುವುದು ತಪ್ಪು. ದೇಶದ ಸಂಸತ್ತಿನ ಮೊದಲ ಸದನ ರಾಜ್ಯಸಭೆ ಎಂಬುದನ್ನು ಪ್ರಧಾನಿ ಆರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. 
ರಾಜ್ಯಸಭೆಯಲ್ಲಿ ಬಿಜೆಪಿ 2004 ರಿಂದ 2014ರ ವರೆಗೆ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಅಡ್ಡಿಪಡಿಸುವಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ ಎಂಬುದನ್ನು ಬಿಜೆಪಿ ಪರಿಶೀಲಿಸಬೇಕು. ಈ ಅವಧಿಯಲ್ಲಿ ಎಷ್ಟು ವಿಧೇಯಕಗಳು ಅಂಗೀಕಾರವಾಗದಂತೆ ತಡೆಹಿಡಿಯಲಾಯಿತು? ಏಷ್ಟು ಸಾಂವಿಧಾನಿಕ ತಿದ್ದುಪಡಿ ವಿದೇಯಕಗಳು ಅಂಗೀಕಾರಗೊಂಡವು? ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವವರೆಗೂ ಜಿಎಸ್ ಟಿ ಕುರಿತ ಸಾಂವಿಧಾನಿಕ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿತ್ತು ಎಂದು ಆನಂದಶರ್ಮಾ ವಿವರಿಸಿದರು. 
ಆದರೆ, ಇದಕ್ಕೆ ಬದಲಾಗಿ, ಕಳೆದ ಐದು ವರ್ಷಗಳಲ್ಲಿ ಪ್ರತಿಪಕ್ಷವಾಗಿ ಕಾಂಗ್ರೆಸ್ ಎರಡು ಸಾಂವಿಧಾನಿಕ ತಿದ್ದುಪಡಿ ವಿಧೇಯಕಗಳು ಅಂಗೀಕರಿಸಲು ನೆರವಾಗಿದೆ. ರಾಜ್ಯ ಸಭೆಯಲ್ಲಿ ಈ ವಿಧೇಯಕಗಳ ಅನುಮೋದನೆ ಪಡೆಯಲು ಕಾಂಗ್ರೆಸ್ ನೀಡಿರುವ ಸಹಕಾರವನ್ನು ಪ್ರಧಾನಿ ಸ್ಮರಿಸಬೇಕಿತ್ತು. ಹಾಗಾಗಿ ಮೋದಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ವಿಧೇಯಕಗಳು ಸಂಸದೀಯ ಸ್ಥಾಯಿ ಸಮಿತಿಗಳ ಮೂಲಕ ಪರಿಶೀಲನೆಗೊಳಗಾಗಬೇಕಾದ ಪ್ರಕ್ರಿಯೆಯನ್ನೇಬದಲಾಯಿಸಿರುವ ಪ್ರಧಾನಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆನಂದ ಶರ್ಮಾ, ಪ್ರತಿಯೊಂದು ವಿಧೇಯಕವೂ ಸೂಕ್ತ ಪರಿಶೀಲನೆ ನಂತರ ಅಂಗೀಕಾರವಾಗಬೇಕು ಎಂಬುದನ್ನು ಖಾತರಿ ಪಡಿಸುವುದು ರಾಜ್ಯಸಭೆಯ ಹೊಣೆಗಾರಿಕೆಯಾಗಿದೆ. ಆದರೆ, ರಾಜ್ಯಸಭೆಯನ್ನು, ರಬ್ಬರ್ ಸ್ಟಾಂಪ್ ಎಂದು ಸರ್ಕಾರ ಪರಿಗಣಿಸಿದೆ. ಆದರೆ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ನಿರುದ್ಯೋಗ ಹಾಗೂ ಭಾರತೀಯ ಆರ್ಥಿಕತೆಗೆ ಪುನಶ್ಚೇತನದಂತಹ ಮೂಲಭೂತ ವಿಷಯಗಳಿಗೆ ತಮ್ಮ ಭಾಷಣದಲ್ಲಿ ಸೂಕ್ತ ಉತ್ತರ ನೀಡುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ ಎಂದರು.
ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲಿ ಅತಿ ಹೆಚ್ಚಿನ ಮಟ್ಟಕ್ಕೆ ಏರಿಕೆಯಾಗಿದೆ. ಬಂಡವಾಳ ಹೂಡಿಕೆ ಕುಸಿತಗೊಂಡಿದೆ. ಆರ್ಥಿಕತೆ ಪುನಶ್ಚೇತನಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬ ಬಗ್ಗೆ ಸದಸ್ಯರು ವಂದನಾ ನಿರ್ಣಯದ ಚರ್ಚೆಯ ವೇಳೆ ಪ್ರಸ್ತಾಪಿಸಿದ್ದರೂ ಈ ವಿಷಯಗಳ ಬಗ್ಗೆ ಯಾವುದೇ ಉತ್ತರ ಪ್ರಧಾನಿ ನೀಡಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com