ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ 6 ತಿಂಗಳು ವಿಸ್ತರಣೆಗೆ ಲೋಕಸಭೆ ಅಸ್ತು

ಜಮ್ಮ ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು 6 ತಿಂಗಳು ವಿಸ್ತರಣೆ ಮಾಡಲು ಲೋಕಸಭೆ ಶುಕ್ರವಾರ ಸಮ್ಮತಿ ನೀಡಿದೆ.
ಅಮಿತ್ ಶಾ
ಅಮಿತ್ ಶಾ
ನವದೆಹಲಿ: ಜಮ್ಮ ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು 6 ತಿಂಗಳು ವಿಸ್ತರಣೆ ಮಾಡಲು ಲೋಕಸಭೆ ಶುಕ್ರವಾರ ಸಮ್ಮತಿ ನೀಡಿದೆ.
ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಇಂದು ಲೋಕಸಭೆಯಲ್ಲಿ ಜುಲೈ 3ರಿಂದ ಮತ್ತೆ ಆರು ತಿಂಗಳವರೆಗೆ ಜಮ್ಮುಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ವಿಸ್ತರಿಸುವಂತೆ ಕೋರಿ ಶಾಸನಬದ್ಧ ನಿರ್ಣಯ ಮಂಡಿಸಿದ್ದರು. 
ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅಮಿತ್​ ಶಾ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ವಿಸರ್ಜಿಸಿದ ನಂತರ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಹಲವು ಕಾರಣಗಳಿಂದಾಗಿ ಚುನಾವಣಾ ಆಯೋಗ ಈ ವರ್ಷದ ಕೊನೆಯಲ್ಲಿ ಹೊಸದಾಗಿ ಚುನಾವಣೆ ನಡೆಸಲು ನಿರ್ಧರಿಸಿದೆ. ಹಾಗಾಗಿ ಜುಲೈ 3 ರಿಂದ 6 ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆಯನ್ನು ವಿಸ್ತರಿಸುವ ಅಗತ್ಯವಿದೆ. ಈ ಮೊದಲು ರಾಜ್ಯದಲ್ಲಿ 2 ಬಾರಿ ರಾಷ್ಟ್ರಪತಿ ಮತ್ತು 7 ಬಾರಿ ರಾಜ್ಯಪಾಲರ ಆಳ್ವಿಕೆ ಹೇರಲಾಗಿತ್ತು ಎಂದು ತಿಳಿಸಿದರು.
ಈ ವರ್ಷದ ಅಂತ್ಯದ ವೇಳೆಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಅವರು ಸಂಸತ್ತಿಗೆ ಮಾಹಿತಿ ನೀಡಿದರು. ಅಲ್ಲದೆ ಇದೇ ವೇಳೆ ಈ ಹಿಂದಿನ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆಯನ್ನು ಬದಲಿಸಲು 2019 ರ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದರು. 
ಕಾನೂನಿನ ಪ್ರಕಾರ ರಾಜ್ಯದಲ್ಲಿ ಶೇ. 43 ರಷ್ಟು ಮೀಸಲಾತಿ ಲಭ್ಯವಿದೆ ಮತ್ತು ಇದರ ಅಡಿಯಲ್ಲಿ  ಶೇ. 3 ರಷ್ಟು ನಿಯಂತ್ರಣ ರೇಖೆಯ ಉದ್ದಕ್ಕೂ ವಾಸಿಸುವ ಜನರಿಗೆ ಮೀಸಲಿಡಲಾಗಿದೆ ಎಂದು ಶಾ ಹೇಳಿದರು.
ಈ ನೂತನ ಮಸೂದೆಯು ರಾಜ್ಯದ ಅಂತರರಾಷ್ಟ್ರೀಯ ಗಡಿಯಲ್ಲಿ ವಾಸಿಸುವ ಜನರಿಗೆ ಶೇ.3 ರಷ್ಟು ಮೀಸಲಾತಿ ವಿಸ್ತರಿಸಲು ಅವಕಾಶ ನೀಡುತ್ತದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com