ನೀರಿನ ಸಂರಕ್ಷಣೆಯ ಸಾಂಪ್ರದಾಯಿಕ ವಿಧಾನಗಳ ಮಾಹಿತಿ ಹಂಚಿಕೊಳ್ಳಿ;ಮನ್ ಕಿ ಬಾತ್ ಸೀಸನ್ 2 ನಲ್ಲಿ ಪ್ರಧಾನಿ ಮೋದಿ ಕರೆ

ಮನ್ ಕಿ ಬಾತ್ ರೇಡಿಯೋ ಸರಣಿ ಕಾರ್ಯಕ್ರಮ ದೇಶದ 130 ಕೋಟಿ ಭಾರತೀಯರ ಸಾಮರ್ಥ್ಯಗಳ ಉತ್ಸಾಹವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ...

Published: 30th June 2019 12:00 PM  |   Last Updated: 30th June 2019 12:51 PM   |  A+A-


PM Narendra Modi

ಪ್ರಧಾನ ಮಂತ್ರಿ ನರೇಂದ್ರ ಮೋದಿ

Posted By : SUD SUD
Source : ANI
ನವದೆಹಲಿ: ಮನ್ ಕಿ ಬಾತ್ ರೇಡಿಯೋ ಸರಣಿ ಕಾರ್ಯಕ್ರಮ ದೇಶದ 130 ಕೋಟಿ ಭಾರತೀಯರ ಸಾಮರ್ಥ್ಯಗಳ ಉತ್ಸಾಹವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಲೋಕಸಭೆ ಚುನಾವಣೆ ನಂತರ ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರತಿ ತಿಂಗಳ ಕೊನೆಯ ಭಾನುವಾರದ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ ನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಪುನರಾರಂಭಿಸಿದ್ದಾರೆ.

ಭಾಷಣದಲ್ಲಿ ಅವರು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಇಂದು ಬೇರೆ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ, ನನ್ನ ಅಂತರಾತ್ಮವನ್ನು ಕಂಡುಕೊಳ್ಳಲು ಕೇದಾರನಾಥ ಯಾತ್ರೆ ಮಾಡಿ ಗುಹೆಯಲ್ಲಿ ಏಕಾಂತವಾಗಿ ಕುಳಿತು ಧ್ಯಾನ ಮಾಡಿದೆ. ಮನ್ ಕಿ ಬಾತ್ ನಲ್ಲಿ ಹಲವು ತಿಂಗಳುಗಳಿಂದ ಮಾತನಾಡದೆ ಉಂಟಾಗಿದ್ದ ನಿರ್ವಾತ ಸ್ಥಿತಿಯನ್ನು ಕೇದಾರನಾಥ ಗುಹೆಯಲ್ಲಿ ಕಂಡುಕೊಳ್ಳಲು ಅವಕಾಶ ಸಿಕ್ಕಿತು. ಆದರೆ ನನ್ನ ಈ ಯಾತ್ರೆ ಮತ್ತು ಗುಹೆಯಲ್ಲಿ ಮಾಡಿದ ಧ್ಯಾನವನ್ನು ಕೆಲವರು ರಾಜಕೀಯಗೊಳಿಸಲು ನೋಡಿದರು ಎಂದರು.

ನಮ್ಮ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿಕೆ ಮಾಡಿದಾಗ ಕೇವಲ ರಾಜಕೀಯ ವಲಯದಲ್ಲಿ ಅಥವಾ ರಾಜಕೀಯ ನಾಯಕರು ಮಾತ್ರ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಲ್ಲ, ಜೈಲಿಗೆ ಮಾತ್ರ ಚಳವಳಿ ಸೀಮಿತವಾಗಿರಲಿಲ್ಲ, ಪ್ರತಿಯೊಬ್ಬರ ಆತ್ಮಸಾಕ್ಷಿಯಲ್ಲಿ ಸಿಟ್ಟು, ಆಕ್ರೋಶ, ಬೇಸರವಿದ್ದಿತು.  

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ 61 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ಚುನಾವಣೆಯಿದು. ಅರುಣಾಚಲ ಪ್ರದೇಶದ ಕುಗ್ರಾಮದಲ್ಲಿ ಕೂಡ ಒಬ್ಬ ಮತದಾರರಿಗೆ ಮತಗಟ್ಟೆಯನ್ನು ತೆರೆಯಲಾಯಿತು, ಯಶಸ್ವಿಯಾಗಿ ಚುನಾವಣೆ ಮುಗಿಸಿದ ಚುನಾವಣಾ ಆಯೋಗ, ಭದ್ರತಾ ಸಿಬ್ಬಂದಿ, ಪೊಲೀಸರಿಗೆ ಅಭಿನಂದನೆ ಎಂದರು.

ಚುನಾವಣೆಯಲ್ಲಿ ಜನರ ಉತ್ಸಾಹ ಅತ್ಯದ್ಬುತವಾಗಿತ್ತು. ಜನರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಟ್ಟಿರುವ ನಂಬಿಕೆಯನ್ನು ಇದು ತೋರಿಸುತ್ತದೆ ಎಂದರು.

ಕಳೆದ ಫೆಬ್ರವರಿಯಲ್ಲಿ ನಾನು ಮನ್ ಕಿ ಬಾತ್ ನಲ್ಲಿ ಇನ್ನು ಕೆಲವೇ ತಿಂಗಳಲ್ಲಿ ನಿಮ್ಮ ಮುಂದೆ ಮತ್ತೆ ಬರುತ್ತೇನೆ ಎಂದಾಗ ಕೆಲವರು ನಾನು ಅತಿಯಾದ ಆತ್ಮವಿಶ್ವಾಸ ತೋರಿಸುತ್ತಿದ್ದೇನೆ ಎಂದರು. ಆದರೆ ನನಗೆ ಜನರ ಮೇಲೆ ನಂಬಿಕೆಯಿತ್ತು ಎಂದು ಪ್ರಧಾನಿ ಮೋದಿ ತಾವು ಮತ್ತೆ ಪ್ರಧಾನಿಯಾದ ಬಗ್ಗೆ ಹೇಳಿದರು. ಪ್ರಜಾಪ್ರಭುತ್ವ ನಮ್ಮ ದೇಶದ ಸಂಸ್ಕೃತಿ ಮತ್ತು ನೀತಿಯ ಒಂದು ಭಾಗವಾಗಿದೆ ಎಂದರು.

ಇತ್ತೀಚೆಗೆ ಪ್ರೇಮಚಂದ್ ಅವರ ಸಣ್ಣ ಕಥೆಗಳ ಪುಸ್ತಕವನ್ನು ನನಗೆ ಒಬ್ಬರು ಉಡುಗೊರೆಯಾಗಿ ನೀಡಿದರು. ಪುಸ್ತಕ ತುಂಬಾ ಚೆನ್ನಾಗಿದೆ. ಆರ್ಥಿಕ ಅಸಮಾನಥೆ ಕುರಿತ ನಶ ಕಥೆ ನನ್ನನ್ನು ಜ್ಞಾನನನ್ನಾಗಿಸಿದರೆ, ಯುವಕ ಹಮೀದ್ ನ ಈದ್ಗಾ ಕಥೆ ನನ್ನ ಹೃದಯವನ್ನು ತಟ್ಟಿತು ಎಂದರು.

ಪ್ರಧಾನಿ ಮೋದಿ ಇಂದಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನೀರಿನ ಸಂರಕ್ಷಣೆ ಮಹತ್ವವನ್ನು ಕೂಡ ಪ್ರಸ್ತಾಪಿಸಿದ್ದಾರೆ. ನೀರಿನ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಹೊಸ ಜಲಶಕ್ತಿ ಸಚಿವಾಲಯವನ್ನು ದೇಶದಲ್ಲಿ ಸ್ಥಾಪಿಸಲಾಗಿದೆ. ನೀರಿನ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವಾಲಯ ಕ್ಷಿಪ್ರ ನಿರ್ಧಾರ ಮಾಡುತ್ತದೆ ಎಂದರು.

ಪ್ರತಿವರ್ಷ ದೇಶದ ವಿವಿಧ ಭಾಗಗಳಲ್ಲಿ ನೀರಿನ ಸಮಸ್ಯೆ ತಲೆದೋರುತ್ತದೆ. ನಮ್ಮ ದೇಶದಲ್ಲಿ ಇಡೀ ವರ್ಷದಲ್ಲಿ ಕೇವಲ ಶೇಕಡಾ 8ರಷ್ಟು ಮಾತ್ರ ಮಳೆ ನೀರು ಕೊಯ್ಲು ನಡೆಯುತ್ತದೆ. ಈ ಸಂದರ್ಭದಲ್ಲಿ ನಾನು ಎಲ್ಲರಲ್ಲಿಯೂ 3 ವಿಷಯಗಳ ಕುರಿತು ಮನವಿ ಮಾಡಿಕೊಳ್ಳುತ್ತೇನೆ. ನೀರಿನ ಸಂರಕ್ಷಣೆ ಬಗ್ಗೆ ಸಮಾಜದ ಎಲ್ಲಾ ವರ್ಗಗಳಲ್ಲಿರುವ ಪ್ರಮುಖ ಜನರು ಅರಿವು ಮೂಡಿಸಬೇಕು. ನೀರಿನ ಸಂರಕ್ಷಣೆಯ ಸಾಂಪ್ರದಾಯಿಕ ವಿಧಾನಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಿ. ನೀರಿನ ಸಂರಕ್ಷಣೆ ಬಗ್ಗೆ ಕೆಲಸ ಮಾಡುತ್ತಿರುವ ವ್ಯಕ್ತಿ ಅಥವಾ ಸಂಘ-ಸಂಸ್ಥೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಿ ಎಂದು ಪ್ರಧಾನಿ ಮನ್ ಕಿ ಬಾತ್ ನಲ್ಲಿ ಮನವಿ ಮಾಡಿಕೊಂಡರು.

ಸೆಲೆಬ್ರಿಟಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರು ದೇಶಾದ್ಯಂತ ನೀರಿನ ಮಹತ್ವ ಕುರಿತು ಅಭಿಯಾನ ಆರಂಭಿಸಬೇಕು. ಸ್ವಚ್ಛ ಅಭಿಯಾನ ರೀತಿಯಲ್ಲಿ ದೇಶಾದ್ಯಂತ ನೀರಿನ ಸಂರಕ್ಷಣೆ ಕುರಿತು ಅಭಿಯಾನ ಆರಂಭಿಸಿ.ಜನಶಕ್ತಿಜಲಶಕ್ತಿ ಹ್ಯಾಶ್ ಟ್ಯಾಗ್ ನ್ನು ಬಳಸಿ ನೀರಿನ ಸಂರಕ್ಷಣೆ ಕುರಿತು ನಿಮ್ಮ ವಿಷಯ ಮತ್ತು ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಮಾಡಿ ಎಂದ ಕರೆ ಕೊಟ್ಟರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp