ಪುಲ್ವಾಮ ದಾಳಿ ದಿನವೇ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ್ದ ವಾಯುಸೇನೆ..!, 2.0 ರೋಚಕ ಮಾಹಿತಿ

44 ಮಂದಿ ಸೈನಿಕರ ಸಾವಿಗೆ ಕಾರಣವಾಗಿದ್ದ ಪುಲ್ವಾಮ ಉಗ್ರ ದಾಳಿ ಬಳಿಕ ಭಾರತೀಯ ಸೇನೆ ತನ್ನ ವಾಯುದಳದ ಮೂಲಕ ಪಿಒಕೆಯಲ್ಲಿ ವಾಯುದಾಳಿ ನಡೆಸಿ ಸೇಡು ತೀರಿಸಿಕೊಂಡಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: 44 ಮಂದಿ ಸೈನಿಕರ ಸಾವಿಗೆ ಕಾರಣವಾಗಿದ್ದ ಪುಲ್ವಾಮ ಉಗ್ರ ದಾಳಿ ಬಳಿಕ ಭಾರತೀಯ ಸೇನೆ ತನ್ನ ವಾಯುದಳದ ಮೂಲಕ ಪಿಒಕೆಯಲ್ಲಿ ವಾಯುದಾಳಿ ನಡೆಸಿ ಸೇಡು ತೀರಿಸಿಕೊಂಡಿತ್ತು.
ಈ ದಾಳಿ ಸಂಬಂಧ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಪಿಒಕೆ ಮೇಲಿನ ಅಕ್ರಮಣಕ್ಕಾಗಿ ಸೇನೆ ತನ್ನ ವಾಯುದಳವನ್ನೇ ಬಳಸಿಕೊಂಡಿದ್ದೇಕೆ ಎಂಬ ರೋಚಕ ಮಾಹಿತಿ ಹೊರಬಿದ್ದಿದೆ.
ವಾಯುದಾಳಿ ಕುರಿತು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದ ಸೇನೆ..!
ಪುಲ್ವಾಮ ಉಗ್ರ ದಾಳಿ ಬೆನ್ನಲ್ಲೇ ಭಾರತೀಯ ಸೇನೆ ತಾನು ಪಿಒಕೆಯಲ್ಲಿ ವಾಯುದಾಳಿ ಮಾಡುವ ಕುರಿತು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿತ್ತು. ಫೆಬ್ರವರಿ 14ರ ಪುಲ್ವಾಮ ಉಗ್ರ ದಾಳಿ ನಡೆದ ಬಳಿಕ ಅಂದರೆ ಫೆಬ್ರವರಿ 16ರಂದು ಭಾರತೀಯ ಸೇನೆ ಪಂಜಾಬ್ ಪ್ರಾಂತ್ಯದ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ನಡೆದ ಎಲ್ ಒಸಿ ಬಳಿಯ ಬಹವಲ್ ಪುರ ಪ್ರಾಂತ್ಯದಲ್ಲಿ ತನ್ನ 'ವಾಯುಶಕ್ತಿ' ವೈಮಾನಿಕ ತಾಲೀಮು ನಡೆಸಿತ್ತು. ಸತತ 10 ದಿನಗಳ ಈ ತಾಲೀಮಿನ ಬಳಿಕ ತಾನೂ ಸಂಪೂರ್ಣ ತಯಾರಿಯೊಂದಿಗೆ ವಾಯುಸೇನೆ ಪಿಒಕೆ ಮೇಲೆ ಅಕ್ರಮಣ ಮಾಡಿತು.
ಪಿಒಕೆಯಲ್ಲಿ ವಾಯುದಾಳಿ ಮಾಡುವ ಯುದ್ಧ ವಿಮಾನ ಮತ್ತು ಹೆಲಿಕಾಪ್ಚರ್ ಗಳ ಪರೀಕ್ಷೆಗಾಗಿಯೇ ಸೇನೆ ಈ ಬೃಹತ್ ವಾಯುಶಕ್ತಿ ವೈಮಾನಿಕ ಪ್ರದರ್ಶನವನ್ನು ಆಯೋಜಿಸಿತ್ತು ಎಂಬ ರೋಚಕ ಸಂಗತಿ ಕೂಡ ಇದೀಗ ಬೆಳಕಿಗೆ ಬಂದಿದೆ. ವೈಮಾನಿಕ ತಾಲೀಮಿನ ವೇಳೆ ಭಾರತ ತನ್ನ ವಾಯುಸೇನೆಯ ಎಲ್ಲ ಮಾದರಿಯ ಯುದ್ಧ ವಿಮಾನಗಳು, ಜೆಟ್ ಗಳು, ಹೆಲಿಕಾಪ್ಟರ್ ಗಳ ಪರೀಕ್ಷೆ ನಡೆಸಿತ್ತು.
ಈ ಪೈಕಿ ಎಲ್ಲ ಸಂದರ್ಭಕ್ಕೂ ಎಲ್ಲ ರೀತಿಯ ಹವಾಮಾನಕ್ಕೂ ಮಿರಾಜ್ 2000 ಯುದ್ಧ ವಿಮಾನ ಹೊಂದಿಕೊಳ್ಳಲಿದೆ ಮತ್ತು ತಾನು ನಿಗದಿ ಪಡಿಸಿರುವ ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಅನ್ನು ಹೊತ್ತೊಯ್ದು ನಿಖರ ಗುರಿಗಳ ಮೇಲೆ ಎಸೆಯಲು ಸೂಕ್ತ ವಿಮಾನ ಎಂದು ನಿರ್ಧರಿಸಲಾಯಿತು. ಆ ಮೂಲಕ ಸೇನೆಯ ಒಟ್ಟು 12 ಮಿರಾಜ್ 2000 ಯುದ್ಧ ವಿಮಾನಗಳಿಗೆ ಈ ಸ್ಪೈಸ್ 2000 ಬಾಂಬ್ ಗಳನ್ನು ಅಳವಡಿಸಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಬಾಲಕೋಟ್, ಚಕೋಟಿ ಸೇರಿದಂತೆ ಒಟ್ಟು ನಾಲ್ಕು ಉಗ್ರ ಕ್ಯಾಂಪ್ ಗಳ ಮೇಲೆ ಯಶಸ್ವಿಯಾಗಿ ಎಸೆದು ಸುರಕ್ಷಿತವಾಗಿ ಜೆಟ್ ಗಳು ಭಾರತ ಸೇರಿದ್ದವು.
ಪುಲ್ವಾಮ ಉಗ್ರದಾಳಿ ನಡೆದ ದಿನವೇ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ್ದ ವಾಯುಸೇನೆ
ಇನ್ನು ಪುಲ್ವಾಮ ಉಗ್ರದಾಳಿ ನಡೆದ ಫೆಬ್ರವರಿ 14ರಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಅವರು, ಉಗ್ರ ದಾಳಿ ವಿರುದ್ಧ ಈ ಬಾರಿ ತಾವು ಕಾರ್ಯಾಚರಣೆ ನಡೆಸುತ್ತೇವೆ ಎಂದು ಹೇಳಿದ್ದರು. ಇದಕ್ಕೆ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ಧೋವಲ್ ಸಮ್ಮತಿ ಕೂಡ ನೀಡಿದ್ದರು. ಇದೇ ಕಾರಣಕ್ಕಾಗಿಯೇ ಫೆಬ್ರವರಿ 16ರಿಂದಲೇ ವಾಯುಶಕ್ತಿ ವೈಮಾನಿಕ ಪ್ರದರ್ಶನಕ್ಕೆ ಸಭೆಯಲ್ಲಿ ಅನುಮೋದನೆ ಕೂಡ ನೀಡಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ಫೆಬ್ರವರಿ 14ರಂದು ಜೆಇಎಂ ಉಗ್ರರು ಸಿಆರ್‌ಪಿಎಫ್‌ ಬೆಂಗಾವಲು ವಾಹನದ ಮೇಲೆ ನಡೆಸಿದ ದಾಳಿಯಲ್ಲಿ 40 ಮಂದಿ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಕಳೆದ ವಾರ ಭಾರತದ ವಾಯು ಪಡೆಯ ವಿಮಾನಗಳು ಜೆಇಎಂ ಉಗ್ರರ ಅಡಗುತಾಣ ಬಾಲಾಕೋಟ್‌ ಮೇಲೆ ಮೇಲೆ ವೈಮಾನಿಕ ದಾಳಿ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com