'ಕೈ' ಹಿಡಿಯಲು 9 ಆಪ್​ ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ: ಕಾಂಗ್ರೆಸ್

ಲೋಕಸಭಾ ಚುನಾವಣೆಯಲ್ಲಿ ಆಪ್ ಜೊತೆ ಮೈತ್ರಿಗೆ ನಿರಾಕರಿಸಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ 9 ಶಾಸಕರು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ....
ಶೀಲಾ ದೀಕ್ಷಿತ್
ಶೀಲಾ ದೀಕ್ಷಿತ್
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಆಪ್ ಜೊತೆ ಮೈತ್ರಿಗೆ ನಿರಾಕರಿಸಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ 9 ಶಾಸಕರು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ದೆಹಲಿ ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ 9 ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಅವರು ಕಾಂಗ್ರೆಸ್ ಸೇರಲು ಸಿದ್ಧರಿದ್ದಾರೆ ಎಂದು ದೆಹಲಿ ಕಾಂಗ್ರೆಸ್ ವಕ್ತಾರ ಜೀತೇಂದ್ರ ಕೊಚಾರ್ ಅವರು ಹೇಳಿದ್ದಾರೆ. 
ಆಮಾನತುಗೊಂಡ ಆಪ್ ಶಾಸಕ ಹಾಗೂ ಮಾಜಿ ಸಚಿವ ಸಂದೀಪ್ ಕುಮಾರ್ ಅವರು ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ದೀಕ್ಷಿತ್ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಕೊಚಾರ್ ಅವರು ಈ ಹೇಳಿಕೆ ನೀಡಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರಿಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.
ಈ ಮಧ್ಯೆ, ಕಾಂಗ್ರೆಸ್ ಸೇರುವ ಯಾವುದೇ ಯೋಚನೆ ಇಲ್ಲ ಎಂದು ಸಂದೀಪ್ ಕುಮಾರ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಸಲುವಾಗಿ ಕಾಂಗ್ರೆಸ್​ ಸೇರಿದಂತೆ ಎಲ್ಲ ವಿರೋಧಪಕ್ಷಗಳು ಮಹಾಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದವು. ಆ ಮೂಲಕ ದೇಶದಲ್ಲಿ ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸಲು ತಂತ್ರ ರೂಪಿಸಿದ್ದವು. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್​ ಜೊತೆಗೆ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಎದುರಿಸಲು ಆಮ್​ ಆದ್ಮಿ ಪಕ್ಷ ಯೋಜನೆ ರೂಪಿಸಿತ್ತು. ಈ ಬಗ್ಗೆ ಅರವಿಂದ್​ ಕೇಜ್ರಿವಾಲ್ ಸಾಕಷ್ಟು ಬಾರಿ ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆಯನ್ನೂ ಮಾಡಿದ್ದರು. ಆದರೆ, ಕಾಂಗ್ರೆಸ್​ ದೆಹಲಿಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿತ್ತು.
ಇದರಿಂದ ಅಸಮಾಧಾನಗೊಂಡಿದ್ದ ಸಿಎಂ ಅರವಿಂದ್​ ಕೇಜ್ರಿವಾಲ್ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಿಜೆಪಿ ಜೊತೆಗೆ ಕಾಂಗ್ರೆಸ್​ ಗೌಪ್ಯ ಒಪ್ಪಂದ ಮಾಡಿಕೊಂಡಿದೆ. ಬೇರೆಲ್ಲ ಪಕ್ಷಗಳು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಬಯಸಿದ್ದರೆ ಕಾಂಗ್ರೆಸ್​ ಮಾತ್ರ ಬಿಜೆಪಿ ವಿರೋಧಿ ಪಕ್ಷಗಳ ಮತಗಳನ್ನು ಒಡೆಯುವ ಮೂಲಕ ಬಿಜೆಪಿಗೆ ಗೆಲ್ಲಲು ಸಹಾಯ ಮಾಡುತ್ತಿದೆ ಎಂದು ಆರೋಪಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com