ರಾಜ್ಯಕ್ಕೆ 2064 ಕೋಟಿ ರೂ ಅನುದಾನ ತಕ್ಷಣ ಬಿಡುಗಡೆಗೊಳಿಸಿ: ಪ್ರಧಾನಿಗೆ ಎಚ್,ಡಿ ಕುಮಾರಸ್ವಾಮಿ ಮನವಿ

ರಾಜ್ಯದ ಬರ ಪರಿಹಾರ ಹಾಗೂ ನಿರ್ವಹಣೆಗೆ ಎಸ್‍ಡಿಆರ್‍ಎಫ್/ಎನ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ ಅಗತ್ಯವಾಗಿರುವ 2064.30 ಕೋಟಿ ರೂ. ...
ಕುಮಾರಸ್ವಾಮಿ ಅವರಿಂದ ಪ್ರಧಾನಿ  ಜೊತೆ ಚರ್ಚೆ
ಕುಮಾರಸ್ವಾಮಿ ಅವರಿಂದ ಪ್ರಧಾನಿ ಜೊತೆ ಚರ್ಚೆ
ನವದೆಹಲಿ:  ರಾಜ್ಯದ ಬರ ಪರಿಹಾರ ಹಾಗೂ ನಿರ್ವಹಣೆಗೆ ಎಸ್‍ಡಿಆರ್‍ಎಫ್/ಎನ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ ಅಗತ್ಯವಾಗಿರುವ  2064.30 ಕೋಟಿ ರೂ. ಗಳ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ   
ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಪ್ರಕೃತಿ ವಿಕೋಪ ಪರಿಹಾರ ಹಾಗೂ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಾಕಿ ಇರುವ ವೇತನ ಮತ್ತು ಸಾಮಾಗ್ರಿ ವೆಚ್ಚದ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ರಾಜ್ಯವು 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರವಾಹ/ ಭೂಕುಸಿತ ಪರಿಸ್ಥಿತಿ ಹಾಗೂ ಬರ ಪರಿಸ್ಥಿತಿಗಳೆರಡನ್ನೂ ಎದುರಿಸಿದೆ. ಕೊಡಗು ಮತ್ತು ಸಮೀಪದ ಮಲೆನಾಡು ಜಿಲ್ಲೆಗಳು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಭೂ ಕುಸಿತದಿಂದ ತೀವ್ರ ಹಾನಿ ಸಂಭವಿಸಿದರೆ, ಇತರ ಭಾಗಗಳಲ್ಲಿ ಅಂದರೆ ರಾಜ್ಯದ 100 ತಾಲ್ಲೂಕುಗಳಲ್ಲಿ ಮಳೆಯಿಲ್ಲದೆ ಬರ ಪರಿಸ್ಥಿತಿ ತಲೆದೋರಿದೆ ಎಂಬ ಸಂಗತಿಯನ್ನು ವಿವರಿಸಿದ್ದಾರೆ. 
ಇದಕ್ಕೆ ಎಸ್‍ಡಿಆರ್‍ಎಫ್/ ಎನ್‍ಡಿಆರ್‍ಎಫ್ ಮಾರ್ಗಸೂಚಿಗಳ ಪ್ರಕಾರ 2434 ಕೋಟಿ ರೂ. ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ಶೇ. 50 ಕ್ಕೂ ಕಡಿಮೆ ಅಂದರೆ 949.49 ಕೋಟಿ ರೂ. ಪರಿಹಾರ ಮಂಜೂರು ಮಾಡಿದೆ. 
ಹಿಂಗಾರಿನ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ 188 ಮಿಮಿ ಮಳೆಯಾಗಬೇಕಾಗಿದ್ದು, ಕೇವಲ 96 ಮಿ.ಮೀ. ಮಳೆ ಆಗಿದ್ದು, ಉತ್ತರ ಒಳನಾಡಿನಲ್ಲಿ ಶೇ. 66 ರಷ್ಟು ಮಳೆ ಕೊರತೆ ಉಂಟಾಗಿದೆ. ರಾಜ್ಯದ 176 ತಾಲ್ಲೂಕುಗಳಲ್ಲಿ 156 ತಾಲ್ಲೂಕುಗಳು ಬರಪೀಡಿತವೆಂದು ಘೋಷಿಸಲಾಗಿದೆ. ಇದರಲ್ಲಿ 107 ತಾಲ್ಲೂಕುಗಳು ತೀವ್ರ ಬರ ಪೀಡಿತ ಹಾಗೂ 49 ತಾಲ್ಲೂಕುಗಳು ಸಾಧಾರಣ ಬರ ಪೀಡಿತ ಎಂದು ಗುರುತಿಸಲಾಗಿದೆ. ಹಿಂಗಾರು ಅವಧಿಯಲ್ಲಿ 11,384.47 ಕೋಟಿ ರೂ. ಮೌಲ್ಯದ ಬೆಳೆ ನಷ್ಟ ಉಂಟಾಗಿದೆ. 
ಮುಂಗಾರು ಮತ್ತು ಹಿಂಗಾರು ಹಂಗಾಮುಗಳೆರಡರಲ್ಲಿಯೂ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಂಭವಿಸಿದ ನಷ್ಟ 32,335 ಕೋಟಿ ರೂ. ಗಳಷ್ಟಾಗಿದೆ.  ಇದು ರಾಜ್ಯದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಕೇಂದ್ರವೂ ರಾಜ್ಯಕ್ಕೆ ಹೆಚ್ಚಿನ ನೆರವು ನೀಡಬೇಕು ಎಂದು ಕೋರಿದ್ದಾರೆ. 
ತನ್ನ ಇತಿಮಿತಿಯಲ್ಲಿ  ಬರ ಪರಿಸ್ಥಿತಿ ನಿರ್ವಹಣೆಗೆ ರಾಜ್ಯ ಸರ್ಕಾರ ತ್ವರಿತ ಕ್ರಮಗಳನ್ನು ತೆಗೆದುಕೊಂಡಿದ್ದು, ಎಸ್‍ಡಿಆರ್‍ಎಫ್ ನಿಧಿಯಲ್ಲದೆ ರಾಜ್ಯ ಸರ್ಕಾರದಿಂದ 386 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರು, ಮೇವು ಒದಗಿಸುವ ಜೊತೆಗೆ ಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 8.18 ಕೋಟಿ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಇದಕ್ಕಾಗಿ ಬಾಕಿ ಉಳಿದಿರುವ 1351 ಕೋಟಿ ರೂ. ಗಳಷ್ಟು ವೇತನ ಹಾಗೂ ಸಾಮಗ್ರಿ ವೆಚ್ಚದ ಕೇಂದ್ರದ ಪಾಲನ್ನೂ, ಕೇಂದ್ರ ಕೂಡಲೇ ಬಿಡಗಡೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com