ಮೋದಿ-ವಿರೋಧಿ ಮೈತ್ರಿಕೂಟ ಹೆಣೆಯುವ ಹೊಣೆ ಸೋನಿಯಾ ಗಾಂಧಿ ಹೆಗಲಿಗೆ?

ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆ ನಂತರ ಇಚ್ಛೆಯಿಂದಲೋ ಅಥವಾ ಪರಿಸ್ಥಿತಿ ಒತ್ತಡ....
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
ನವದೆಹಲಿ:ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆ ನಂತರ ಇಚ್ಛೆಯಿಂದಲೋ ಅಥವಾ ಪರಿಸ್ಥಿತಿ ಒತ್ತಡಕ್ಕೆ ಮಣಿದೋ ಅವರ ಪತ್ನಿ ಸೋನಿಯಾ ಗಾಂಧಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದರು. ನಂತರ ಕಾಂಗ್ರೆಸ್ ಅಧ್ಯಕ್ಷೆಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಬಂದರು.
ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ 72 ವರ್ಷದ ಸೋನಿಯಾ ಗಾಂಧಿ ಸ್ಪರ್ಧಿಸುತ್ತಿರುವುದು ಇದು ಆರನೇ ಬಾರಿ. ಮೊನ್ನೆಯಷ್ಟೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಕಾಂಗ್ರೆಸ್ ಮೊದಲ ಪಟ್ಟಿ ಪ್ರಕಟವಾಗಿದ್ದು ಈ ಮೂಲಕ ಅನಾರೋಗ್ಯದಿಂದ ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿ ಪಡೆಯುತ್ತಾರೆ , ಮಗ ಮತ್ತು ಮಗಳಿಗೆ ಸಕ್ರಿಯ ರಾಜಕಾರಣದ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಡುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಅಷ್ಟೇ ಅಲ್ಲ ಬಿಜೆಪಿ ವಿರುದ್ಧ ಬೇರೆ ಪಕ್ಷಗಳನ್ನು ಒಗ್ಗೂಡಿಸಿ ಮೋದಿ ವಿರೋಧಿ ಮೈತ್ರಿಕೂಟ ಹೆಣೆಯುವ ಸಾಮರ್ಥ್ಯ ಸೋನಿಯಾ ಗಾಂಧಿಯವರಿಗೆ ಇದೆ ಎಂಬುದನ್ನು ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶದ ಪೂರ್ವ ಭಾಗದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಪ್ರಿಯಾಂಕಾ ಗಾಂಧಿಯವರಿಗೆ ಲೋಕಸಭೆ ಸ್ಪರ್ಧೆಯಲ್ಲಿ ಹಾದಿ ಮಾಡಿಕೊಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಪ್ರಿಯಾಂಕಾ ಹೆಸರು ಇರಲಿಲ್ಲ. ಹೀಗಾಗಿ ಅವರು ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಸೀಮಿತವಾಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.
ಬಿಜೆಪಿ ವಿರುದ್ಧ ಮಹಾ ಘಟಬಂಧನಕ್ಕೆ ಪಕ್ಷಗಳಲ್ಲಿ ಮೈತ್ರಿ ಹೆಚ್ಚಿಸಲು ಸೋನಿಯಾ ಗಾಂಧಿ ಮುಂಚೂಣಿ ವಹಿಸಬೇಕೆಂದು ಮುಖಂಡರು ಬಯಸುತ್ತಿದ್ದಾರೆ. ಪಕ್ಷದ ಮೂಲಗಳು ಹೇಳುವ ಪ್ರಕಾರ, ರಾಹುಲ್ ಮತ್ತು ಪ್ರಿಯಾಂಕ ಪಕ್ಷ ಸಂಘಟನೆಗೆ ಮತ್ತು ಚುನಾವಣಾ ಪ್ರಚಾರದ ಮೇಲೆ ಹೆಚ್ಚು ಗಮನ ಹರಿಸಲಿದ್ದಾರೆ. ಮಹಾಘಟಬಂಧನಕ್ಕೆ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಸೋನಿಯಾ ಗಾಂಧಿ ಗಮನ ಹರಿಸುತ್ತಾರೆ. ಕಳೆದ 19 ವರ್ಷಗಳಲ್ಲಿ ಪಕ್ಷವನ್ನು ಸಂಘಟಿಸಿ ಅದರ ಉಸ್ತುವಾರಿ ವಹಿಸಿಕೊಂಡ ಸೋನಿಯಾ ಗಾಂಧಿಯವರ ಅನುಭವವನ್ನು ಕಡೆಗಣಿಸುವಂತಿಲ್ಲ ಎನ್ನುತ್ತಾರೆ ಕಾಂಗ್ರೆಸ್ ನ ಹಿರಿಯ ನಾಯಕರು.
ಸೋನಿಯಾ ಗಾಂಧಿಯವರ ನಾಯಕತ್ವ, ರಾಜಕೀಯ ಅನುಭವ ಲೋಕಸಭೆ ಚುನಾವಣೆಯಲ್ಲಿ ಅದರಲ್ಲೂ ಉತ್ತರ ಪ್ರದೇಶದಲ್ಲಿ ಪಕ್ಷದ ಗೆಲುವಿಗೆ, ಚುನಾವಣೋತ್ತರ ಮೈತ್ರಿಗೆ ಖಂಡಿತಾ ಸಹಕಾರಿಯಾಗುತ್ತದೆ ಎನ್ನುತ್ತಾರೆ ಕಾಂಗ್ರೆಸ್ ನ ಹಿರಿಯ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್.
ಸೋನಿಯಾ ಗಾಂಧಿಯವರು ಉತ್ಸಾಹದ ಚಿಲುಮೆ, ಕೋಟ್ಯಂತರ ಕಾಂಗ್ರೆಸ್ ಕಾರ್ಯಕರ್ತರಿಗೆ ಅವರು ಮಾರ್ಗದರ್ಶಕಿ. ರಾಯ್ ಬರೇಲಿ ಜನತೆಗೆ ಅವರ ಕೊಡುಗೆಗಳಿಂದ ಅಲ್ಲಿನ ಜನರ ಮನ ಗೆದ್ದಿದ್ದಾರೆ. ಇದೀಗ ಅವರ ಪುತ್ರ ರಾಹುಲ್ ಗಾಂಧಿ ಸಹ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ತಾಯಿಯ ರೀತಿಯಲ್ಲಿಯೇ ಬೆರೆತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ.
ಸೋನಿಯಾ ಗಾಂಧಿಯವರು ಲೋಕಸಭೆ ಚುನಾವಣೆ ಎದುರಿಸುತ್ತಿರುವುದು ಇದು 6ನೇ ಬಾರಿ. 1999ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ನಿಂತು ನಂತರ 2004ರಲ್ಲಿ ರಾಯ್ ಬರೇಲಿಗೆ ತಮ್ಮ ಕ್ಷೇತ್ರವನ್ನು ಬದಲಿಸಿಕೊಂಡರು. ಅಮೇಥಿಯಲ್ಲಿ ಅವರ ಪುತ್ರ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ.
ಮಾಜಿ ಪ್ರಧಾನಿ  ಇಂದಿರಾ ಗಾಂಧಿಯವರ ಹತ್ಯೆಯಾದಾಗ ಪ್ರಧಾನಿ ಹುದ್ದೆ ಅಲಂಕರಿಸುವಂತೆ ರಾಜೀವ್ ಗಾಂಧಿಯವರ ಮನವೊಲಿಸಿದ್ದು ಇದೇ ಸೋನಿಯಾ ಗಾಂಧಿ.
ಆದರೆ 2004ರಲ್ಲಿ ಪ್ರಧಾನಿ ಹುದ್ದೆ ಒಲಿದು ಬಂದಾಗ ಅದನ್ನು ನಿರಾಕರಿಸಿ ಹಿರಿಯ ನಾಯಕ ಡಾ ಮನಮೋಹನ್ ಸಿಂಗ್ ಅವರಿಗೆ ಬಿಟ್ಟುಕೊಟ್ಟರು. ಯುಪಿಎ-1 ಮತ್ತು ಯುಪಿಎ-2ರ ಅವಧಿಯಲ್ಲಿ ಮೈತ್ರಿಕೂಟಗಳನ್ನು ಒಗ್ಗೂಡಿಸಿದ್ದ ಸೋನಿಯಾ ಗಾಂಧಿ ಇದೀಗ ಬಿಜೆಪಿ ವಿರುದ್ಧ ಮತ್ತೊಂದು ಮೈತ್ರಿಯನ್ನು ಒಗ್ಗೂಡಿಸಲು ಅವರ ಅನಿವಾರ್ಯತೆ ರಾಷ್ಟ್ರ ರಾಜಕಾರಣದಲ್ಲಿ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com