ಭಾರತ ಕಂಡ ಅತ್ಯುತ್ತಮ ರಕ್ಷಣಾ ಸಚಿವ: ಮನೋಹರ್ ಪರಿಕ್ಕರ್ ಜಾರಿಗೊಳಿಸಿದ್ದ ಪರಿಣಾಮಕಾರಿ ಯೋಜನೆಗಳಿವು

ಭಾರತದ ಮಾಜಿ ರಕ್ಷಣಾ ಸಚಿವ, ಗೋವಾ ಹಾಲಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ದೀರ್ಘಾವಧಿಯ ಅನಾರೋಗ್ಯದಿಂದ ಮಾ.17 ರಂದು ಇಹ ಲೋಕ ತ್ಯಜಿಸಿದ್ದಾರೆ. ಮನೋಹರ್ ಪರಿಕ್ಕರ್ ಗೋವಾ
ಭಾರತ ಕಂಡ ಅತ್ಯುತ್ತಮ ರಕ್ಷಣಾ ಸಚಿವ: ಮನೋಹರ್ ಪರಿಕ್ಕರ್ ಜಾರಿಗೊಳಿಸಿದ್ದ ಪರಿಣಾಮಕಾರಿ ಯೋಜನೆಳಿವು
ಭಾರತ ಕಂಡ ಅತ್ಯುತ್ತಮ ರಕ್ಷಣಾ ಸಚಿವ: ಮನೋಹರ್ ಪರಿಕ್ಕರ್ ಜಾರಿಗೊಳಿಸಿದ್ದ ಪರಿಣಾಮಕಾರಿ ಯೋಜನೆಳಿವು
ಭಾರತದ ಮಾಜಿ ರಕ್ಷಣಾ ಸಚಿವ, ಗೋವಾ ಹಾಲಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ದೀರ್ಘಾವಧಿಯ ಅನಾರೋಗ್ಯದಿಂದ ಮಾ.17 ರಂದು ಇಹ ಲೋಕ ತ್ಯಜಿಸಿದ್ದಾರೆ. ಮನೋಹರ್ ಪರಿಕ್ಕರ್ ಗೋವಾ ಮುಖ್ಯಮಂತ್ರಿಯಾಗಿ ಎಷ್ಟು ಖ್ಯಾತಿ ಪಡೆದಿದ್ದರೋ ಅದಕ್ಕಿಂತ ಹೆಚ್ಚು ರಕ್ಷಣಾ ಸಚಿವರಾಗಿ ದೇಶದ ಜನಮನ ಗೆದ್ದಿದ್ದರು. 
2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಪೂರ್ಣಾವಧಿಯ ರಕ್ಷಣಾ ಸಚಿವರ ಕೊರತೆಯನ್ನು ಸ್ವಲ್ಪ ಸಮಯದ ಮಟ್ಟಿಗೆ ದೂರವಾಗಿಸಿ, ಆ ಹುದ್ದೆಯನ್ನು ಬಹಳ ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಮನೋಹರ್ ಪರಿಕ್ಕರ್ ಅವರದ್ದು. ಐಐಟಿ ಬಾಂಬೆಯಿಂದ ಮೆಟಾಲರ್ಜಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದ ಮನೋಹರ್ ಪರಿಕ್ಕರ್ ಅವರಿಗಿದ್ದ ತಾಂತ್ರಿಕ ಜ್ಞಾನ ರಕ್ಷಣಾ ಇಲಾಖೆಯಲ್ಲಿ ಗಣನೀಯ ಬದಲಾವಣೆಗೆ ಸಹಕಾರಿಯಾಗಿದ್ದದ್ದು ಸ್ಪಷ್ಟ. 
ಚುನಾವಣಾ ಪೂರ್ವದಲ್ಲಿ  ಪಾಕಿಸ್ತಾನ ಮತ್ತು ಚೀನಾ ದೇಶಗಳ ಅತಿಕ್ರಮಣ, ಅಪ್ರಚೋದಿತ ದಾಳಿ ವಿಚಾರಗಳ ಕುರಿತು ತೀವ್ರ ಆಕ್ರೋಶ ಭರಿತರಾಗಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ  ಬಳಿಕ ರಕ್ಷಣಾ ಇಲಾಖೆಯಲ್ಲಿ ಎಂತಹ ಬದಲಾವಣೆ ಮಾಡಲಿದ್ದಾರೆ ಎಂದು ಕೇವಲ ದೇಶದ ಜನತೆಯಷ್ಟೇ ಅಲ್ಲ ಇಡೀ ವಿಶ್ವ ಸಮುದಾಯವೇ ಕಾತುರದಿಂದ ಕಾಯುತ್ತಿತ್ತು. ಅರುಣ್ ಜೇಟ್ಲಿ ಬಳಿ ಹೆಚ್ಚುವರಿಯಾಗಿದ್ದ ರಕ್ಷಣಾ ಖಾತೆಯನ್ನು ಪಡೆದ ನಂತರದಲ್ಲಿ ಸದ್ದಿಲ್ಲದೇ ಮನೋಹರ್ ಪರಿಕ್ಕರ್ ರಕ್ಷಣಾ ಇಲಾಖೆಯನ್ನು ಬಲಿಷ್ಠಗೊಳಿಸಲು ಬೇಕಾದದ್ದೆಲ್ಲವನ್ನೂ ಮಾಡತೊಡಗಿದರು. 
ವಿದೇಶದಲ್ಲಿದ್ದ ರಕ್ಷಣಾ ಇಲಾಖೆಯ ಸಾವಿರಾರು ಕೋಟಿ ಹಣ ಭಾರತಕ್ಕೆ ವಾಪಸ್ ತರುವಲ್ಲಿ ಯಶಸ್ವಿಯಾಗಿದ್ದ ಪರಿಕ್ಕರ್ 
ಮನೋಹರ್ ಪರಿಕ್ಕರ್ ಅವರು ರಕ್ಷಣಾ ಇಲಾಖೆಯ ನೇತೃತ್ವ ವಹಿಸಿದ ಕೆಲವೇ ತಿಂಗಳುಗಳಲ್ಲಿ ಅಮೆರಿಕದ ದಶಕಗಳಿಂದ ಕೊಳೆಯುತ್ತಿದ್ದ ಭಾರತ ರಕ್ಷಣಾ ಇಲಾಖೆಗೆ ಸೇರಿದ ಸುಮಾರು ಹತ್ತಿರ ಹತ್ತಿರ 40 ಸಾವಿರ ಕೋಟಿ ರು.ಗಳನ್ನು ಪತ್ತೆ ಹಚ್ಚಿ ವಾಪಸ್ ತಂದಿದ್ದರು. ರಕ್ಷಣಾ ಬಜೆಟ್ ಗೆ ಮೀಸಲಿಟ್ಟಷ್ಟೂ ಹಣ ಹೆಚ್ಚು ಬೇಕೆಂಬಂತಹ ಸ್ಥಿತಿ ಎದುರಿಸುತ್ತಿದ್ದ ಭಾರತದ ರಕ್ಷಣಾ ಇಲಾಖೆ ಪಾಲಿಗೆ 40 ಸಾವಿರ ಕೋಟಿ ರೂಪಾಯಿ ವಾಪಸ್ ಬಂದಿದ್ದು ಮಹತ್ವದ ವಿಷಯ. ಯುದ್ಧದ ಸಂದರ್ಭದಲ್ಲಿ ಮಹಿಳಾ ಸೈನಿಕರಿಗೂ ಅವಕಾಶ ಮಾಡಿಕೊಡುವ ಮಹತ್ವದ ನಿರ್ಣಯವಾಗಿದ್ದು ಕೂಡ ಇದೇ ಮನೋಹರ್ ಪರಿಕ್ಕರ್ ರಕ್ಷಣಾ ಸಚಿವರಾಗಿದ್ದ ಅವಧಿಯಲ್ಲೇ.
ತಗ್ಗಿದ ಜಲಾಂತರ್ಗಾಮಿಗಳಲ್ಲಿನ ದುರಂತ ಸರಣಿ
ಭಾರತದ ಜಲಾಂತರ್ಗಾಮಿಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಅಗ್ನಿ ದುರಂತಗಳು ನಿಜಕ್ಕೂ ಜಾಗತಿಕ ಮಟ್ಟದಲ್ಲಿ ಭಾರತ  ರಕ್ಷಣಾ ವ್ಯವಸ್ಥೆಯನ್ನು ಅಣಕಿಸುವಂತೆ ಮಾಡುತ್ತಿತ್ತು. ಐಎನ್ ಎಸ್ ಸಿಂಧೂರತ್ನ ದುರಂತ, ಐಎನ್ ಎಸ್ ಸಿಂಧೂರಕ್ಷಕ್ ದುರಂತ, ಐಎನ್ ಎಸ್ ವಿರಾಟ್ ಅಗ್ನಿ ಅವಘಡ, ಐಎಎನ್ ಎಸ್ ಕೊಂಕಣ,. ಐಎನ್ಎಸ್ ತಲ್ವಾರ್ ಹೀಗೆ ಸಾಲು-ಸಾಲು ಜಲಾಂತರ್ಗಾಮಿ ನೌಕೆಗಳಲ್ಲಿನ ಅಗ್ನಿ ದುರಂತಗಳು ಭಾರತವನ್ನು ವಿಶ್ವ ಮಟ್ಟದಲ್ಲಿ ಮುಜುಗರಕ್ಕೀಡಾಗುವಂತೆ ಮಾಡಿದ್ದವು. ಆದರೆ ಮನೋಹರ್ ಪರಿಕ್ಕರ್ ಪೂರ್ಣಾವಧಿ ರಕ್ಷಣಾ ಸಚಿವರಾದ ಬಳಿಕ ಇವೆಲ್ಲವನ್ನೂ ನಿಯಂತ್ರಣಕ್ಕೆ ತರಲು ಕ್ರಮ ಕೈಗೊಂಡು ಅದರಲ್ಲಿ ಬಹುಪಾಲು ಯಶಸ್ಸನ್ನೂ ಕಂಡರು. ಪರಿಕ್ಕರ್ ಅಧಿಕಾರ ವಹಿಸಿಕೊಂಡ ಅತ್ಯಂತ ಕಡಿಮೆ ಅವಧಿಯಲ್ಲಿ ಇಂತಹ ಅವಘಡಗಳ ಸಂಖ್ಯೆ ಗಣನೀಯವಾಗಿ ಇಳಿದಿತ್ತು.
ರಕ್ಷಣೆಗೆ ತಂತ್ರಜ್ಞಾನ ಮತ್ತು ಆಧುನಿಕತೆಯ ಟಚ್
ಚೀನಾ-ಪಾಕಿಸ್ತಾನ ಆಟಾಟೋಪವನ್ನು ತಹಬದಿಗೆ ತರಲು ರಕ್ಷಣಾ ಇಲಾಖೆಯ ಆಧುನಿಕತೆಯಿಂದ  ಮಾತ್ರ ಸಾಧ್ಯ ಎಂದು ಅರಿತಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ರಕ್ಷಣಾ ಇಲಾಖೆಗೆ ತಂತ್ರಜ್ಞಾನ ಮತ್ತು ಆಧುನಿಕತೆಯ ಟಚ್ ನೀಡಲು  ಮುಂದಾದರು. ಇದರ ಪರಿಣಾಮವಾಗಿಯೇ ಭಾರತ ಇಂದು ಭಾರತೀಯ ಸೇನೆಗೆ ಸಾಕಷ್ಟು ಅತ್ಯಾಧುನಿಕ ಪರಿಕರಗಳು ಸೇರ್ಪಡೆಯಾಗಿವೆ.
ಫ್ರಾನ್ಸ್ ನೊಂದಿಗೆ ರಫಾಲ್ ಯುದ್ಧ ವಿಮಾನ ಖರೀದಿ,  ಪರಮಾಣು ಶಸ್ತ್ರಾಸ್ತ್ರ ಸಹಿತ ಜಲಾಂತರ್ಗಾಮಿ ನೌಕೆಗಳು, ಪರಮಾಣು ಶಸ್ತ್ರಾಸ್ತ್ರ ನಿರೋಧಕ ಜಲಾಂತರ್ಗಾಮಿಗಳು, ಕಣ್ಗಾವಲು ಜಲಾಂತರ್ಗಾಮಿಗಳು ಇಂದು ಭಾರತೀಯ ನೌಕೆ ಪಡೆಯ ಬತ್ತಳಿಕೆ ಸೇರಿವೆ.  ದೇಶೀ ನಿರ್ಮಿತ ಸಿಡಿಗುಂಡು ನಿರೋಧಕ ಸಮರ ನೌಕೆಗಳು, ಅತ್ಯಾಧುನಿಕ ಟ್ಯಾಂಕರ್ ಗಳು, ರಾಡಾರ್ ವ್ಯವಸ್ಥೆ ಸೇರಿದಂತೆ ಚೀನಾ ಹಾಗೂ ಪಾಕಿಸ್ತಾನಕ್ಕೆ ನಿದ್ದೆಗೆಡಿಸುವಂತಹ ಶಸ್ತ್ರಾಸ್ತ್ರಗಳ ಖರೀದಿಗೆ ಒಪ್ಪಂದ ಹಾಗೂ ಖರೀದಿ ನಡೆದಿದ್ದು ಮನೋಹರ್ ಪರಿಕ್ಕರ್ ಅವಧಿಯಲ್ಲಿ ಎಂಬುದು ಗಮನಾರ್ಹ. 
ಮೊದಲೇ ಹೇಳಿದಂತೆ ಮನೋಹರ್ ಪರಿಕ್ಕರ್ ಅವರಿಗಿದ್ದ ತಾಂತ್ರಿಕ ಪರಿಣತಿಯ ಹಿನ್ನೆಲೆ  ರಕ್ಷಣಾ ಇಲಾಖೆಗೆ ಸಹಕಾರಿಯಾಗಿತ್ತು. ಓರ್ವ ಸಚಿವರಾಗಿ ತಾಂತ್ರಿಕ ವಿಷಯಗಳನ್ನು ಸ್ಪಷ್ಟವಾಗಿ ತಿಳಿದುಕೊಂಡರೆ ಆ ಇಲಾಖೆ ಅತ್ಯಂತ ಕಡಿಮೆ ಅವಧಿಯಲ್ಲಿ ಸುಲಭವಾಗಿ ಏನೆಲ್ಲಾ ಮಾಡಲು ಸಾಧ್ಯ ಎಂಬುದಕ್ಕೆ ಮನೋಹರ್ ಪರಿಕ್ಕರ್ ಉತ್ತಮ ಉದಾಹರಣೆಯಾಗಬಲ್ಲರು. ಇವೆಲ್ಲವನ್ನೂ ಮೀರಿ ಮನೋಹರ್ ಪರಿಕ್ಕರ್ ಸರಳ ಸಜ್ಜನ, ಕರ್ತವ್ಯ ನಿಷ್ಠೆ ರಾಣಕಾರಣಕ್ಕೆ ಅತ್ಯುತ್ತಮ ಉದಾಹರಣೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com