26/11ರ ಮುಂಬೈ ದಾಳಿ ನಂತರ ಯುಪಿಎ ಸರ್ಕಾರ ಪ್ರತೀಕಾರ ದಿಟ್ಟ ಕ್ರಮ ಕೈಗೊಳ್ಳಬಹುದಾಗಿತ್ತು: ನಿರ್ಮಲಾ ಸೀತಾರಾಮನ್

2008ರ ಮುಂಬೈ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆ ಯಾವುದೇ ಪ್ರತೀಕಾರ ದಾಳಿ...
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
ಹೈದರಾಬಾದ್: 2008ರ ಮುಂಬೈ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆ ಯಾವುದೇ ಪ್ರತೀಕಾರ ದಾಳಿ ನಡೆಸದಿರುವುದಕ್ಕೆ ಹಿಂದಿನ ಯುಪಿಎ ಸರ್ಕಾರ ತೆಗೆದುಕೊಳ್ಳದೇ ಇದ್ದ ದಿಟ್ಟ ನಿರ್ಧಾರವೇ ಕಾರಣ. ಕಳೆದ ತಿಂಗಳು ಬಾಲಾಕೋಟ್ ನಲ್ಲಿ ನಡೆಸಿದ ವಾಯುದಾಳಿಯಂತಹ ದಾಳಿಯನ್ನು 26/11ರ ಭಯೋತ್ಪಾದಕ ದಾಳಿ ನಂತರ ನಡೆಸಬಹುದಾಗಿತ್ತು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಂಬೈ ಭಯೋತ್ಪಾದಕ ದಾಳಿಯ ನಂತರ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಭಯೋತ್ಪಾದಕರ ವಿರುದ್ಧ ಯಾವುದೇ ನಿರ್ಣಾಯಕ ಪ್ರತೀಕಾರ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಅಂದು ಮುಂಬೈಯಲ್ಲಿ ವಾಣಿಜ್ಯ ಕಟ್ಟಡಗಳ ಮೇಲೆ ಭಯೋತ್ಪಾದಕ ದಾಳಿ ನಡೆದ ಸಂದರ್ಭದಲ್ಲಿ ಭಾರತೀಯ ಸೇನೆ ಕ್ರಮ ಕೈಗೊಳ್ಳಲು ಸಜ್ಜಾಗಿತ್ತು. ಆದರೆ ಅದಕ್ಕೆ ಯುಪಿಎ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ. ಅಂದು ಯುಪಿಎ ಸರ್ಕಾರ ಸರಿಯಾದ ಪ್ರತೀಕಾರ ತೆಗೆದುಕೊಳ್ಳುತ್ತಿದ್ದರೆ ಇಂದು ಭಯೋತ್ಪಾದನೆ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರಲಿಲ್ಲ ಎಂದರು.
ಇತ್ತೀಚಿನ ಬಾಲಾಕೋಟ್ ಮೇಲೆ ಭಾರತೀಯ ವಾಯುಪಡೆಯ ದಾಳಿಯನ್ನು ಕಾಂಗ್ರೆಸ್ ನಾಯಕರು ರಾಜಕೀಯಗೊಳಿಸುತ್ತಿದ್ದಾರೆ ಎಂಬ ಆರೋಪಕ್ಕೆ ರಕ್ಷಣಾ ಸಚಿವೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನ ಸ್ಥಿತಿಯುಂಟಾಗಲು ಕೇಂದ್ರ ಸರ್ಕಾರ ಕಾರಣ, ಜೈಶ್ ಎ ಮೊಹಮ್ಮದ್ ಸಂಘಟನೆ ಮೇಲಿನ ದಾಳಿ ಹೆಸರಿನಲ್ಲಿ ಬಿಜೆಪಿ ಇಡೀ ವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com