ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ಫೋನಿ ಚಂಡಮಾರುತ, ಭಾರಿ ಮಳೆ, ಧರೆಗುರುಳಿದ ಮರಗಳು!

ನಿರೀಕ್ಷೆಯಂತೆಯೇ ಇಂದು ಮುಂಜಾನೆ ಪಶ್ಚಿಮ ಬಂಗಾಳಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿದ್ದು, ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಹಲವಾರು ಮರಗಳು ಧರೆಗುರುಳಿವೆ ಎಂದು ತಿಳಿದುಬಂದಿದೆ.
ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ಫೋನಿ ಚಂಡಮಾರುತ
ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ಫೋನಿ ಚಂಡಮಾರುತ
ಕೋಲ್ಕತಾ: ನಿರೀಕ್ಷೆಯಂತೆಯೇ ಇಂದು ಮುಂಜಾನೆ ಪಶ್ಚಿಮ ಬಂಗಾಳಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿದ್ದು, ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಹಲವಾರು ಮರಗಳು ಧರೆಗುರುಳಿವೆ ಎಂದು ತಿಳಿದುಬಂದಿದೆ.

ನಿನ್ನೆ ಬೆಳಗ್ಗೆ ಪ್ರತೀ ಗಂಟೆಗೆ 200 ಕಿ ಮೀ ವೇಗದಲ್ಲಿ ಸಾಗಿದ್ದ ಫೋನಿ ಚಂಡಮಾರುತ ಒಡಿಶಾದ ಪುರಿ ಕಡಲ ತೀರವನ್ನು ಅಪ್ಪಳಿಸಿತ್ತು. ಕಡಲ ತೀರಕ್ಕೆ ಒಪ್ಪಳಿಸಿದ ಚಂಡಮಾರುತದ ವೇಗ ಪ್ರತೀ ಗಂಟೆಗೆ 245 ಕಿ.ಮೀ ಇತ್ತು. ಆದರೆ ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ವೇಗ ಕಡಿಮೆಯಾಗಿದ್ದು,  ಪ್ರತೀ ಗಂಟೆಗೆ ಚಂಡಮಾರುತ 70-80 ವೇಗದಲ್ಲಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಂಡಮಾರುತದ ವೇಗ ಕಡಿಮೆಯಾದರೂ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ್ ನಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಪಶ್ಚಿಮ ಮಿಡ್ನಾಪುರದಿಂದ ಸುಮಾರು 15 ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದ್ದು, ಶುಕ್ರವಾರ ರಾತ್ರಿಯಿಂದಲೇ ಇವರನ್ನು ಗಂಜಿ ಕೇಂದ್ರಗಳಲ್ಲಿ ಇಟ್ಟು ರಕ್ಷಣೆ ಮಾಡಲಾಗಿದೆ. ಮಿಡ್ನಾಪುರ್ ನಲ್ಲಿ ಪ್ರಸ್ತುತ 20 ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ರಾತ್ರಿ 12.30ರಲ್ಲಿ ಒಡಿಶಾದ ಬಾಲಾಸೋರ್ ಪ್ರವೇಶ ಮಾಡಿದ್ದ ಫೋನಿ ಚಂಡಮಾರುತ ಇಂದು ಮುಂಜಾನೆ ಪಶ್ಚಿಮ ಬಂಗಾಳಕ್ಕೆ ಪ್ರವೇಶ ಮಾಡಿದೆ. ಬಳಿಕ ಮಧ್ಯಾಹ್ನದ ಹೊತ್ತಿಗೆ ಚಂಡಮಾರುತ ಈಶಾನ್ಯ ಭಾಗದತ್ತ ಮುಖಮಾಡಿ ಬರ್ದ್ವಾನ್-ಹೂಗ್ಲಿ  ಗಡಿ ಮೂಲಕ ನಾಡಿಯಾ ದಿಂದ ಬಾಂಗ್ಲಾದೇಶ ಪ್ರವೇಶ ಮಾಡಲಿದೆ. ಅಷ್ಟು ಹೊತ್ತಿಗಾಗಲೇ ಚಂಡಮಾರುತದ ವೇಗ ಮತ್ತಷ್ಟು ಕ್ಷೀಣಿಸಿರುತ್ತದೆ. ಆದರೂ ಭಾರಿ ಮಳೆ ಸಂಭವವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿನ್ನೆ ಒಡಿಶಾದ ಪುರಿ ಕಡಲ ತೀರಕ್ಕೆ ಅಪ್ಪಳಿಸಿದ್ದ ಫೋನಿ ಚಂಡಮಾರುತ ಭಾರಿ ಅವಾಂತರ ಸೃಷ್ಟಿ ಮಾಡಿತ್ತು. ಅಲ್ಲದೆ ಚಂಡಮಾರುತ ಮತ್ತು ಇತರೆ ಮಳೆ ಸಂಬಂಧಿತ ಅವಘಡಗಳಲ್ಲಿ 8 ಮಂದಿ ಸಾವಿಗೀಡಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com