ವಿಡಿಯೊ ಗೇಮ್ ಗೆ ಸರ್ಜಿಕಲ್ ಸ್ಟ್ರೈಕ್ ಹೋಲಿಕೆ; ಪ್ರಧಾನಿ ಮೋದಿ ಸೇನೆಗೆ ಮಾಡಿದ ಅಪಮಾನ: ರಾಹುಲ್ ಗಾಂಧಿ

ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶದ ಆರ್ಥಿಕತೆ ಸಂಪೂರ್ಣ ನಾಶವಾಗಿದೆ, ಉದ್ಯೋಗ...
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ
ನವದೆಹಲಿ: ಸರ್ಜಿಕಲ್ ಸ್ಟ್ರೈಕ್ ನ್ನು ವಿಡಿಯೊ ಗೇಮ್ ಗೆ ಹೋಲಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಸೇನೆಗೆ ಅಗೌರವ ತೋರಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ದೆಹಲಿಯಲ್ಲಿಂದು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೇನೆ ಪ್ರಧಾನ ಮಂತ್ರಿಯವರ ಖಾಸಗಿ ಆಸ್ತಿಯಲ್ಲ. ದೇಶದ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯನ್ನು ತಮ್ಮ ಖಾಸಗಿ ಆಸ್ತಿಯೆಂದು ಮೋದಿಯವರು ಭಾವಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಸರ್ಜಿಕಲ್ ಸ್ಟ್ರೈಕ್ ನ್ನು ಮೋದಿಯವರು ಮಾಡಿದ್ದಲ್ಲ. ಅದನ್ನು ಭಾರತೀಯ ಸೇನೆ ಮಾಡಿದ್ದು. ಹಿಂದಿನ ಯುಪಿಎ ಅವಧಿಯಲ್ಲಿ ಆದ ಸರ್ಜಿಕಲ್ ಸ್ಟ್ರೈಕ್ ನಿಜವಾದದ್ದಲ್ಲ, ಅದು ವಿಡಿಯೊ ಗೇಮ್ ಎಂದು ಮೋದಿಯವರು ಹೇಳುತ್ತಾರೆ. ಅವರು ಹೀಗೆ ಹೇಳುವ ಮೂಲಕ ಕಾಂಗ್ರೆಸ್ ನ್ನು ಅವಮಾನ ಮಾಡುತ್ತಿಲ್ಲ. ಬದಲಾಗಿ ಗೌರವದ ಭಾರತೀಯ ಸೇನೆಗೆ ಅಪಮಾನ ಮಾಡಿದ್ದಾರೆ ಎಂದರು.
ಮಾಧ್ಯಮಗಳಿಗೆ ಅಗತ್ಯವಿದ್ದರೆ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಸರ್ಜಿಕಲ್ ಸ್ಟ್ರೈಕ್ ನ ದಾಖಲೆಗಳನ್ನು ತೋರಿಸುತ್ತೇವೆ. 2008ರಿಂದ 2014ರವರೆಗೆ ಯುಪಿಎ ಸರ್ಕಾರದ ಅವಧಿಯಲ್ಲಿ 6 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು, ಆ ದಿನಾಂಕಗಳನ್ನು ಕೂಡ ನೀಡಲಾಗಿದೆ ಎಂದು ಜನರಲ್ ವಿಕ್ರಮ್ ಸಿಂಗ್ ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಈ ಕೆಲಸ ಮಾಡಿದ್ದು ಭಾರತೀಯ ಸೇನೆ. ಆದರೆ ಅದನ್ನು ಹೇಳಿಕೊಂಡು ಪ್ರಚಾರ ಪಡೆದು ನಾವು ರಾಜಕೀಯಗೊಳಿಸಲು ಬಯಸುವುದಿಲ್ಲ. ದೇಶದ ಪ್ರಧಾನಿಯಾಗಿ ಮೋದಿಯವರು ಸೇನೆಗೆ ಗೌರವ ತೋರಿಸಬೇಕು ಎಂದರು.
ನಿನ್ನೆ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ್ದ  ನರೇಂದ್ರ ಮೋದಿಯವರು ಸರ್ಜಿಕಲ್ ಸ್ಟ್ರೈಕ್ ನ್ನು ಪ್ರಶ್ನಿಸಿದ್ದ ಪಕ್ಷ ಇಂದು ಮಿ ಟೂ ಮಿ ಟೂ ಎಂದು ಹೇಳುತ್ತಿದೆ. ಸರ್ಜಿಕಲ್ ಸ್ಟ್ರೈಕ್ ಎಂದರೆ ವಿಡಿಯೊ ಗೇಮ್ ಅಲ್ಲ ಎಂದು ಟೀಕಿಸಿದ್ದರು.
 ಮೋದಿಯವರು ಪ್ರಧಾನಿಯಾದ ನಂತರ ದೇಶದ ಆರ್ಥಿಕತೆ ಸಂಪೂರ್ಣ ನಾಶವಾಗಿದೆ, ಉದ್ಯೋಗ ಸೃಷ್ಟಿಯಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಅವರು ಸೋಲುತ್ತಾರೆ ಎಂದು ಕೂಡ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿಯವರಿಂದ ದೇಶದ ಜನರು ಇಂದು ಉತ್ತರ ಕೇಳುತ್ತಿದ್ದಾರೆ. ಆದರೆ ಮೋದಿಯವರು ಉದ್ಯೋಗ ಸೃಷ್ಟಿ ಅಥವಾ ರೈತರ ಸಮಸ್ಯೆ ಬಗೆಹರಿಸುವ ಯಾವುದೇ ಮಾತನಾಡುತ್ತಿಲ್ಲ, ಏಕೆಂದರೆ ಅವರ ಬಳಿ ಉತ್ತರವಿಲ್ಲ. ಈ ಸಂದರ್ಭದಲ್ಲಿ ದೇಶದ ಜನರು ಮತ್ತು ರಾಹುಲ್ ಗಾಂಧಿ ಪ್ರಧಾನಿಯಿಂದ ಉತ್ತರ ಕೇಳುತ್ತಿದ್ದಾರೆ. ಇಲ್ಲಿ ರಾಹುಲ್ ಗಾಂಧಿ ಏನೂ ಅಲ್ಲ. ದೇಶದ ಮುಂದೆ ಯಾರೂ ದೊಡ್ಡವರಲ್ಲ ಎಂದರು.
ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಭರವಸೆ ನೀಡಿದ್ದರು. ಈ ಬಾರಿಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ. ಇದರಲ್ಲಿ ನಾವು ಏನು ಮಾಡುತ್ತೇವೆ, ಹೇಗೆ ಮಾಡುತ್ತೇವೆ ಎಂದು ಕೂಡ ವಿವರಿಸಿದ್ದೇವೆ ಎಂದರು.
ಇಡೀ ವ್ಯವಸ್ಥೆಯನ್ನು ಹಾಳು ಮಾಡುವುದು ಮೋದಿಯವರ ಕೆಲಸ. ನಾವು ಅವರ ಜೊತೆಗೆ ನಾಲ್ಕೈದು ಚುನಾವಣೆಗಳನ್ನು ಎದುರಿಸಿದ್ದೇವೆ. ಗುಜರಾತ್, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಗಢದಲ್ಲಿ ಅವರನ್ನು ಚುನಾವಣೆಯಲ್ಲಿ ಎದುರಿಸಿದ್ದೇವೆ. ತಾವು ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಅವರಿಗೆ ಗೊತ್ತಾಗಿದೆ. ಹೀಗಾಗಿ ಗುಜರಾತ್ ನಲ್ಲಿ ಹೊಸ ವಿಷಯವನ್ನು ತೆಗೆದುಕೊಂಡು ಬಂದರು.ಮೋದಿಯವರು ಈ ಚುನಾವಣೆಯಲ್ಲಿ ಸೋಲುವುದು ಖಚಿತ ಎಂದು ಅವರ ಮುಖದಲ್ಲಿಯೇ ಗೊತ್ತಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com