ಫೋನಿ ಚಂಡಮಾರುತ: ಸಾವಿನ ಸಂಖ್ಯೆ 37ಕ್ಕೆ ಏರಿಕೆ, ಕೇಂದ್ರದ ನೆರವು ಕೋರಿದ ಒಡಿಶಾ

ಕಳೆದ ವಾರ ಮೂರು ರಾಜ್ಯಗಳಲ್ಲಿ ಅಬ್ಬರಿಸಿದ್ದ ಫೋನಿ ಚಂಡಮಾರುತಕ್ಕೆ ಒಡಿಶಾದಲ್ಲಿ ಬಲಿಯಾದವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಭುವನೇಶ್ವರ್: ಕಳೆದ ವಾರ ಮೂರು ರಾಜ್ಯಗಳಲ್ಲಿ ಅಬ್ಬರಿಸಿದ್ದ ಫೋನಿ ಚಂಡಮಾರುತಕ್ಕೆ ಒಡಿಶಾದಲ್ಲಿ ಬಲಿಯಾದವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಬರೊಬ್ಬರಿ 200 ಕಿ.ಮೀ ವೇಗದಲ್ಲಿ ಒಡಿಶಾದ ಪುರಿ ಕಡಲ ತೀರಕ್ಕೆ ಅಪ್ಪಳಿಸಿದ್ದ ಫೋನಿ ಚಂಡಮಾರುತ ಭಾರಿ ಅವಾಂತರ ಸೃಷ್ಟಿ ಮಾಡಿತ್ತು. ಚಂಡಮಾರುತದ ತೀವ್ರತೆಗೆ ಒಡಿಶಾ ಕರಾವಳಿ ತೀರಾದಲ್ಲಿ ಅಕ್ಷರಶಃ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ನೂರಾರು ಮರಗಳು, ವಿದ್ಯುತ್ಯ ಕಂಬಗಳು ನೆಲಕ್ಕುರುಳಿದ್ದವು. ಚಂಡಮಾರುತ ಅಪ್ಪಳಿಸಿದ ಒಂದು ವಾರದ ಬಳಿಕವೂ ಒಡಿಶಾ ಸಹಜ ಸ್ಥಿತಿಗೆ ಮರಳಲು ಹೆಣಗಾಡುತ್ತಿದೆ. 
ಪ್ರಮುಖವಾಗಿ ಚಂಡಮಾರುತ ಅಬ್ಬರಕ್ಕೆ ತತ್ತರಿಸಿ ಹೋಗಿದ್ದ ಪುರಿ ಮತ್ತು ಖುರ್ದಾ ಜಿಲ್ಲೆಗಳಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದ್ದು, ಇಲ್ಲಿ ಕಳೆದೊಂದು ವಾರದಿಂದ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಈ ಎರಡು ಜಿಲ್ಲೆಗಳಲ್ಲೇ ಸುಮಾರು 1.56 ಲಕ್ಷ ವಿದ್ಯುತ್ ಕಂಬಗಳು ನೆಲಕ್ಕುರುಳಿಸಿದ್ದು, ಸಾವಿರಾರು ಮರಗಳು ಧರೆಗುರುಳಿವೆ. ಇದೀಗ ಇಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಒಡಿಶಾ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಮಾರ್ಪಟ್ಟಿದ್ದು, ಸಿಬ್ಬಂದಿಗಳ ಮತ್ತು ನಿಧಿಯ ಕೊರತೆ ಎದುರಾಗಿದೆ.
ಒಡಿಶಾ ವಿದ್ಯುತ್ ಇಲಾಖೆಯ ಸಿಬ್ಬಂದಿ ಈ ಎರಡು ಜಿಲ್ಲೆಗಳಲ್ಲಿ ವಿದ್ಯುತ್ ಪೂರೈಕೆ ಮಾಡಲು ಹರಸಾಹಸ ಪಡುತ್ತಿದ್ದಾರೆಯಾದರೂ, ಸಿಬ್ಬಂದಿಗಳ ಸಾಲುತ್ತಿಲ್ಲ. ಹೀಗಾಗಿ ಒಡಿಶಾ ಸರ್ಕಾರ ಕೇಂದ್ರ ಸರ್ಕಾರದ ಮೊರೆ ಹೋಗಿದ್ದು, ಕೇಂದ್ರದಿಂದ ನೆರವು ಕೇಳಿದೆ.
ಸಾವಿನ ಸಂಖ್ಯೆ 37ಕ್ಕೆ ಏರಿಕೆ
ಇದೇ ವೇಳೆ ಒಡಿಶಾದಲ್ಲಿ ಫೋನಿ ಚಂಡಮಾರುತದ ಅಬ್ಬರಕ್ಕೆ ಸಾವನ್ನಪ್ಪಿದವರ ಸಂಖ್ಯೆ 37ಕ್ಕೆ ಏರಿಕೆಯಾಗಿದ್ದು, ಈ ಹಿಂದೆ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದವರ ಪೈಕಿ ನಿನ್ನೆ ಮತ್ತೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕಟಕ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಪುರಿ ಜಿಲ್ಲಾ ಸ್ಪತ್ರೆಯಲ್ಲಿ ಇನ್ನೂ 21 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಜೈಪುರ., ಮಯೂರ್ ಭಂಜ್ ಜಿಲ್ಲೆಗಳಲ್ಲಿ ತಲಾ 2 ಸಾವಾಗಿದ್ದು, ಕೇಂದ್ರಪಾರಾ ಜಿಲ್ಲೆಯಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶೇಷ ರಕ್ಷಣಾ ಕಾರ್ಯಾಚರಣೆ ಘಟಕದ ಆಯುಕ್ತ ಬಿಪಿ ಸೇಠಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಒಡಿಶಾದಲ್ಲಿ ವಿದ್ಯುತ್ ಪೂರೈಕೆ ಸಹಜ ಸ್ಥಿತಿಗೆ ತಲುಪಲು ಇನ್ನೂ ಒಂದಷ್ಟು ಸಮಯ ಬೇಕಾಗುತ್ತದೆ. ಇಲ್ಲಿ ಸುಮಾರು 5 ಸಾವಿರ ಮಂದಿ ಕೌಶಲ್ಯ ಹೊಂದಿದೆ ಲೈನ್ ಮನ್ ಗಳ ಅವಶ್ಯಕತೆ ಇದ್ದು, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ನೆರೆ ಪಶ್ಚಿಮ ಬಂಗಾಳದಿಂದ ಲೈನ್ ಮನ್ ಗಳು ಒಡಿಶಾಗೆ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com