ಎಫ್ 21 ವಿಮಾನ ಖರೀದಿಗೆ ಭಾರತ ಮುಂದಾದರೆ, ಬೇರಾವುದೇ ದೇಶಕ್ಕೆ ಅದನ್ನು ಮಾರುವುದಿಲ್ಲ: ಲಾಕ್ಹೀಡ್ ಮಾರ್ಟಿನ್

ತನ್ನ ಎಫ್ 21 ಯುದ್ಧ ವಿಮಾನವನ್ನು ಭಾರತ ಖರೀದಿಸಲು ಮುಂದಾದರೆ ಆ ಯುದ್ಧ ವಿಮಾನವನ್ನು ಮತ್ತಾವುದೇ ದೇಶಕ್ಕೆ ಮಾರಾಟ ಮಾಡುವುದಿಲ್ಲ ಎಂದು ಖ್ಯಾತ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಲಾಕ್ಹೀಡ್ ಮಾರ್ಟಿನ್ ಸಂಸ್ಥೆ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ತನ್ನ ಎಫ್ 21 ಯುದ್ಧ ವಿಮಾನವನ್ನು ಭಾರತ ಖರೀದಿಸಲು ಮುಂದಾದರೆ ಆ ಯುದ್ಧ ವಿಮಾನವನ್ನು ಮತ್ತಾವುದೇ ದೇಶಕ್ಕೆ ಮಾರಾಟ ಮಾಡುವುದಿಲ್ಲ ಎಂದು ಖ್ಯಾತ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಲಾಕ್ಹೀಡ್ ಮಾರ್ಟಿನ್ ಸಂಸ್ಥೆ ಹೇಳಿದೆ.
ಮೂಲಗಳ ಪ್ರಕಾರ ಭಾರತೀಯ ವಾಯುಸೇನೆಗೆ ಇನ್ನೂ 21 ಸ್ಕ್ವಾಡ್ರನ್ ಯುದ್ಧ ವಿಮಾನಗಳ ಅವಶ್ಯಕತೆ ಇದ್ದು, ಈ ಸಮಸ್ಯೆ ನೀಗಿಸಲು ಭಾರತ ಸರ್ಕಾರ ಎಫ್ 21 ಸೇರಿದಂತೆ ವಿಶ್ವದ ಹಲವು ಖ್ಯಾತನಾಮ ಮತ್ತು ಬಲಿಷ್ಠ ಯುದ್ಧ ವಿಮಾನಗಳ ಖರೀದಿಗೆ ಆಸಕ್ತಿ ತೋರಿದೆ. ಈ ಸಂಬಂಧ ಈಗಾಗಲೇ ಭಾರತ ಸರ್ಕಾರ ಫ್ರಾನ್ಸ್, ಅಮೆರಿಕ, ರಷ್ಯಾ ಸೇರಿದಂತೆ ವಿವಿಧ ಯುದ್ಧ ವಿಮಾನ ನಿರ್ಮಾಣ ಸಂಸ್ಥೆಗಳನ್ನು ಸಂಪರ್ಕಿಸಿದ್ದು, ಈ ಪೈಕಿ ಅಮೆರಿಕ ಏರೋಸ್ಪೇಸ್ ದಿಗ್ಗಜ ಲಾಕ್‌ಹೀಡ್ ಮಾರ್ಟಿನ್ ಸಂಸ್ಥೆಯ ಬಲಿಷ್ಠ ಎಫ್ 21 ಯುದ್ಧ ವಿಮಾನ ಖರೀದಿಗೆ ಭಾರತ ಆಸಕ್ತಿ ತೋರಿದೆ ಎನ್ನಲಾಗಿದೆ.
ಇದೀಗ ಇದೇ ವಿಚಾರವಾಗಿ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಲಾಕ್ಹೀಡ್ ಮಾರ್ಟಿನ್ ಸಂಸ್ಥೆ, ಭಾರತ ತನ್ನ ಅತ್ಯಾಧುನಿಕ ಎಫ್ 21 ಯುದ್ಧ ವಿಮಾನ ಖರೀದಿಗೆ ಮುಂದಾದರೇ ಆ ಯುದ್ಧ ವಿಮಾನವನ್ನು ಮತ್ತಾವುದೇ ದೇಶಕ್ಕೆ ಮಾರಾಟ ಮಾಡುವುದಿಲ್ಲ ಎಂದು ಭರವಸೆ ನೀಡಿದೆ. 'ಭಾರತ 114 ಎಫ್21 ಯುದ್ಧ ವಿಮಾನಗಳ ಖರೀದಿಗೆ ಕಾರ್ಯಾದೇಶ ನೀಡಿದರೆ, ನೂತನವಾಗಿ ನಿರ್ಮಾಣಗೊಳಿಸಿರುವ ಎಫ್21 ಯುದ್ಧ ವಿಮಾನಗಳನ್ನು ಇತರೆ ಯಾವ ದೇಶಕ್ಕೂ ನೀಡುವುದಿಲ್ಲ ಎಂದು ಲಾಕ್ಹೀಡ್ ಮಾರ್ಟಿನ್ ಸಂಸ್ಥೆ ಹೇಳಿದೆ.
ಈ ಬಗ್ಗೆ ಪಿಟಿಐ ಸುದ್ದಿಸಂಸ್ಛೆಯೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ವಾಕ್ಹೀಡ್ ಮಾರ್ಟಿನ್ ಸಂಸ್ಥೆ ವ್ಯಾಪಾರ ತಂತ್ರಗಾರಿಕೆ ಮತ್ತು ಮಾರ್ಕೆಟಿಂಗ್ ವಿಭಾಗ ಉಪಾಧ್ಯಕ್ಷ ವಿವೇಕ್ ಲಾಲ್ ಅವರು ಸ್ಪಷ್ಟನೆ ನೀಡಿದ್ದು, ಭಾರತ ಎಫ್ 21 ಯುದ್ಧ ವಿಮಾನವನ್ನು ಖರೀದಿಲುವುದಾದರೆ ಈ ಮಾದರಿಯ ವಿಮಾನಗಳನ್ನುನಾವು ಯಾವುದೇ ದೇಶಕ್ಕೂ ಮಾರಾಟ ಮಾಡುವುದಿಲ್ಲ. ಇದು ನಮ್ಮ ಜವಾಬ್ದಾರಿ ಮತ್ತು ಭಾರತ ಕುರಿತು ನಮಗಿರುವ ವಿಶೇಷ ಗೌರವ ಎಂದು ಹೇಳಿದ್ದಾರೆ.
ಯುರೋಪಿಯನ್‌ ಹಾಗೂ ರಷ್ಯಾದ ಏರೋಸ್ಪೇಸ್ ಪ್ರತಿಸ್ಪರ್ಧಿಗಳನ್ನು ಗುರಿಯಾಗಿರಿಸಿಕೊಂಡು ಲಾಕ್ಹೀಡ್ ಈ ಪ್ರಸ್ತಾವ ಇರಿಸಿದೆ. ಕಳೆದ ತಿಂಗಳು ಭಾರತೀಯ ವಾಯುಸೇನೆ ಅಂದಾಜು 1.26 ಲಕ್ಷ ಕೋಟಿ ರೂ ವೆಚ್ಚದಲ್ಲಿ 114 ಯುದ್ಧ ವಿಮಾನಗಳಿಗೆ ಪ್ರಾಥಮಿಕ ಹಂತದ ಟೆಂಡರ್ ಆಹ್ವಾನಿಸಿತ್ತು. ಇನ್ನು ಭಾರತದ ಟೆಂಡರ್ ಅಹ್ವಾನಕ್ಕೆ ವಿಶ್ವದ ದಿಗ್ಗಜ ವಿಮಾನ ತಯಾರಿಕಾ ಸಂಸ್ಛೆಗಳಾದ ಅಮೆರಿಕದ ಲಾಕ್ಹೀಡ್ ಮಾರ್ಟಿನ್, ಬೋಯಿಂಗ್, ಫ್ರಾನ್ಸ್ ನ ಡಸ್ಸಾಲ್ಟ್ ಏವಿಯೇಷನ್, ಯೂರೋಪ್ ನ ಯೂರೋಫೈಟರ್ ಟೈಫೂನ್, ರಷ್ಯಾದ ಸಾಬ್ಸ್ ಗ್ರಿಪೆನ್ ಸಂಸ್ಥೆಗಳು ಭಾರತಕ್ಕೆ ಯುದ್ಧ ವಿಮಾನ ಮಾರಾಟ ಮಾಡಲು ಮುಂದಾಗಿವೆ.
ಪಾಕಿಸ್ತಾನದ ಮಹದಾಸೆಗೆ ಬರೆ
ಇನ್ನು ಈಗಾಗಲೇ ಅಮೆರಿಕದಿಂದ ಎಫ್ 16 ಯುದ್ದವಿಮಾನಗಳನ್ನು ಎರವಲು ಪಡೆದಿರುವ ಪಾಕಿಸ್ತಾನ ತನ್ನ ಸೇನೆಗೆ ಎಫ್ 21 ಯುದ್ಧ ವಿಮಾನವನ್ನು ಸೇರಿಸಿಕೊಳ್ಳಬೇಕು ಎಂಬ ಮಹದಾಸೆಯನ್ನು ಹೊಂದಿದೆ. ಆದರೆ ಪಾಕಿಸ್ತಾನದ ಈ ಕನಸು ಕಮರಿ ಹೋಗುವ ಸಾಧ್ಯತೆ ಇದ್ದು, ಭಾರತ ಸರ್ಕಾರ ಎಫ್ 21 ಯುದ್ಧ ವಿಮಾನ ಖರೀದಿಗೆ ಅನುಮೋದನೆ ನೀಡಿದ್ದೇ ಆದರೆ ಆಗ ಲಾಕ್ಹೀಡ್ ಮಾರ್ಟಿನ್ ಸಂಸ್ಥೆ ಒಪ್ಪಂದದ ಪ್ರಕಾರ ಎಫ್ 21 ಅನ್ನು ಬೇರಾವುದೇ ದೇಶಕ್ಕೇ ಮಾರಾಟ ಮಾಡುವಂತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com