'ನೀಚ್ ಆದ್ಮಿ' ಹೇಳಿಕೆ ವಿವಾದ: ನನ್ನ ಪ್ರತೀ ಹೇಳಿಕೆಗೂ ನಾನು ಬದ್ಧ- ಮಣಿ ಶಂಕರ್ ಅಯ್ಯರ್

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತಾವು ನೀಡಿದ್ದ ನೀಚ್ ಆದ್ಮಿ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತಾವು ನೀಡಿದ್ದ ನೀಚ್ ಆದ್ಮಿ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರು ಹೇಳಿದ್ದಾರೆ.
2017ರ ಡಿಸೆಂಬರ್ ನಲ್ಲಿ ಪತ್ರಿಕೆಯೊಂದರಲ್ಲಿ ಅಂಕಣ ಬರೆದಿದ್ದ ಅಯ್ಯರ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀಚ್ ಆದ್ಮಿ ಎಂದು ಹೇಳಿಕೆ ನೀಡಿ ಪಕ್ಷದಿಂದಲೇ ಅಮಾನತಾಗಿದ್ದರು. 
ಇದೀಗ ಎನ್ ಐಎ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಮಣಿಶಂಕರ್ ಅಯ್ಯರ್ ಅವರು, ಅಂದು ನಾನು ಬರೆದಿದ್ದ ಪ್ರತೀಯೊಂದು ಅಕ್ಷರಕ್ಕೂ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ. ಅಂತೆಯೇ ಇದೇ ಮೇ 23ರಂದು ಮೋದಿ ಭವಿಷ್ಯ ನಿರ್ಧಾರವಾಗಲಿದ್ದು, ಜನರಿಂದ ತಿರಸ್ಕೃತರಾಗಲಿದ್ದಾರೆ. ಸೈನಿಕರ ತ್ಯಾಗವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಂಡ ಮೋದಿಗೆ ನಿಜಕ್ಕೂ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ.
ನನ್ನ ಅಭಿಪ್ರಾಯದಂತೆ ಮೋದಿ ನಾಗರೀಕ ವ್ಯಕ್ತಿಯೇ ಇಲ್ಲ, ತಮ್ಮ ರಾಜಕೀಯ ಅಭಿವೃದ್ಧಿಗೆ ಯಾರನ್ನು ಬೇಕಾದರೂ ಬಳಸಿಕೊಳ್ಳುತ್ತಾರೆ. ಸೈನಿಕರ ತ್ಯಾಗವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡ ಮೋದಿ ಕೂಡ ದೇಶದ್ರೋಹಿಯಲ್ಲವೇ ಎಂದು ಹೇಳಿದ್ದಾರೆ.
2017ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಅಂಕಣ ಬರೆದಿದ್ದ ಮಣಿಶಂಕರ್ ಅಯ್ಯರ್ ಪ್ರಧಾನಿ ಮೋದಿ ಕುರಿತಂತೆ ನೀಡಿದ್ದ ನೀಚ್ ಆದ್ಮಿ ಹೇಳಿಕೆ ವ್ಯಾಪಕ ವಿವಾದಕ್ಕೆ ಕಾರಣವಾಗಿತ್ತು. ಮೋದಿ ವಿರುದ್ಧದ ಹೇಳಿಕೆಗೆ ಬಿಜೆಪಿ ಮಾತ್ರವಲ್ಲದೇ ಕಾಂಗ್ರೆಸ್ ನಾಯಕರಿಂದಲೂ ಟೀಕೆಗೆ ಗುರಿಯಾಗಿತ್ತು. ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಣಿ ಶಂಕರ್ ಅವರನ್ನು ಪಕ್ಷದ ಹುದ್ದೆಯಿಂದ ಕೆಳಗಿಳಿಯುವಂತೆ ಸೂಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com