'ಐ ವಿಲ್ ಹಿಟ್ ಯು', ಮೋದಿ ಓರ್ವ ಹೇಡಿ; ಪ್ರಶ್ನೆ ಕೇಳಿದ ಪತ್ರಕರ್ತನ ಮೇಲೆ ಮಣಿ ಶಂಕರ್ ಅಯ್ಯರ್ ಕಿಡಿ!

ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀಚ ಆದ್ಮಿ ಎಂದು ಹೇಳುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಅಯ್ಯರ್ ಇದೀಗ ಪತ್ರಕರ್ತನನ್ನು ಥಳಿಸುವ ಬೆದರಿಕೆಯೊಡ್ಡಿ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀಚ ಆದ್ಮಿ ಎಂದು ಹೇಳುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಅಯ್ಯರ್ ಇದೀಗ ಪತ್ರಕರ್ತನನ್ನು ಥಳಿಸುವ ಬೆದರಿಕೆಯೊಡ್ಡಿ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರನ್ನು 2017ರಲ್ಲಿ 'ನೀಚ್ ಆದ್ಮಿ' ಎಂದು ಹೇಳಿದ್ದನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್ ಅವರು ಮತ್ತೊಂದು ವಿವಾದಕ್ಕೆ ತಮ್ಮನ್ನು ಎಳೆದುಕೊಂಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ತಮ್ಮ ನೀಚ ಆದ್ಮಿ ಕುರಿತಂತೆ ಪ್ರಶ್ನೆ ಕೇಳಿದ ಪತ್ರಕರ್ತನನ್ನು ಥಳಿಸುವುದಾಗಿ ಹೇಳಿ ಅಯ್ಯರ್ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮೋದಿಯವರ ಬಗ್ಗೆ ಹೀನ ಮಾತುಗಳನ್ನಾಡಿದ್ದನ್ನು ಸಮರ್ಥಿಸಿ ಬರೆದ ಲೇಖನದ ಬಗ್ಗೆ ಪತ್ರಕರ್ತ ಪ್ರಸ್ತಾಪಿಸಿ ಪ್ರಶ್ನೆ ಕೇಳಿದಾಗ ತಾಳ್ಮೆ ಕಳೆದುಕೊಂಡ ಮಣಿ ಶಂಕರ್ ಅಯ್ಯರ್, 'ನಿಮಗೆ ನರೇಂದ್ರ ಮೋದಿ ಎಂಬ ವ್ಯಕ್ತಿ ಇದ್ದಾನೆ ಎಂಬುದು ಗೊತ್ತಿಲ್ಲವೆ? ಅವರು ಮಾಡುತ್ತಿರುವ ವಾಗ್ದಾಳಿಯ ಬಗ್ಗೆ ತಿಳಿದಿಲ್ಲವೆ? ಬೇಕಿದ್ದರೆ ಅವರನ್ನು ಹೋಗಿ ಪ್ರಶ್ನೆ ಕೇಳಿ.  ಅವರು ಹೇಡಿಯಂತೆ ವರ್ತಿಸುವುದರಿಂದ ಅವರು ನಿಮ್ಮೊಂದಿಗೆ ಮಾತಾನಾಡುವುದಿಲ್ಲ. ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
ಅಂತೆಯೇ  ಪತ್ರಕರ್ತನ ಮೇಲೆ ಕೈ ಮಾಡಲು ಮುಂದಾದ ಅಯ್ಯರ್ ತಮ್ಮ ಮುಂದಿದ್ದ, ಮೈಕ್ರೋಫೋನ್ ಅನ್ನು ತಳ್ಳಿ, ನೀವು ನನಗೆ ಯಾವುದೇ ಪ್ರಶ್ನೆ ಕೇಳುವಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ ಪ್ರಶ್ನೆ ಕೇಳಲು ರಿಪೋರ್ಟರ್ ಮುಂದಾದಾಗ, 'ಐ ವಿಲ್ ಹಿಟ್ ಯು' ಎಂದು ಅವರ ಮೇಲೆ ಮುಗಿಬಿದ್ದರು. ಬಳಿಕ ಪತ್ರಕರ್ತ ಕ್ಷಮೆ ಕೇಳಿದರೂ ಬಿಡದ ಮಣಿ ಶಂಕರ್ ಅಯ್ಯರ್ ಅವರು ಕೆಟ್ಟ ಪದಗಳಲ್ಲಿ ಅವರನ್ನು ನಿಂದಿಸಿದರು.
ಆನ್ ಕ್ಲೌಡ್ ನೈನ್ ಆಫ್ ನ್ಯಾಷನಾಲಿಸಂ ಎಂಬ ಶೀರ್ಷಿಕೆಯಡಿಯಲ್ಲಿ ಕಾಶ್ಮೀರದ ಬಗ್ಗೆ ಲೇಖನ ಬರೆದಿದ್ದ ಅಯ್ಯರ್ ಅವರು, ಅದರಲ್ಲಿ ನರೇಂದ್ರ ಮೋದಿಯವರನ್ನು ಕೆಟ್ಟ ಬಾಯಿಯ ಮನುಷ್ಯ ಎಂದು ಹೀಗಳೆದಿದ್ದರು. ನಾನು 2017ರ ಡಿಸೆಂಬರ್ ನಲ್ಲಿ ಏನು ಹೇಳಿದ್ದೆ, ಅದೀಗ ನಿಜವಾಗಿದೆ. ನಾನು ಅಂದೇ ಭವಿಷ್ಯ ನುಡಿದಿರಲಿಲ್ಲವೆ? ಎಂದು ಅಂದು ಹೇಳಿದ ಮಾತನ್ನು ಸಮರ್ಥಿಸಿಕೊಂಡಿದ್ದು ವಿವಾದದ ಕಿಡಿಯನ್ನು ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು, ಗುಜರಾತ್ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ, 'ನೀಚ್ ಕಿಸಂ ಕಾ ಆದ್ಮಿ' ಎಂದು ಮಣಿ ಶಂಕರ್ ಅಯ್ಯರ್ ಅವರು ಜರಿದಿದ್ದರು. ಇದಕ್ಕಾಗಿ ಅವರನ್ನು ತಾತ್ಕಾಲಿಕವಾಗಿ ಪಕ್ಷದಿಂದಲೇ ಉಚ್ಚಾಟಿಸಲಾಗಿತ್ತು. ಆದರೆ, ಒಂದು ವರ್ಷದ ಅವಧಿಯಲ್ಲಿಯೇ ಅವರನ್ನು ರಾಹುಲ್ ಗಾಂಧಿ ಅವರು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಇದೀಗ ಮತ್ತೆ ಅಯ್ಯರ್ ವಿವಾದಗಳನ್ನು ತಮ್ಮ ಮೈ ಮೇಲೆ ಎಳೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com