ಮಮತಾ ತಿರುಚಿದ ಚಿತ್ರ: ಪ್ರಾಥಮಿಕ ದೂರಿನನ್ವಯ ಪ್ರಿಯಾಂಕಾ ಶರ್ಮಾ ಬಂಧನ - ಸುಪ್ರೀಂ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಫೋಟೋ ತಿರುಚಿ ಮೆಟ್ ಗಾಲಾ ರೂಪ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಬಿಜೆಪಿ....
ಪ್ರಿಯಾಂಕಾ ಶರ್ಮಾ
ಪ್ರಿಯಾಂಕಾ ಶರ್ಮಾ
ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಫೋಟೋ ತಿರುಚಿ ಮೆಟ್ ಗಾಲಾ ರೂಪ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಬಿಜೆಪಿ ಯುವಮೋರ್ಚಾ ನಾಯಕಿ ಪ್ರಿಯಾಂಕಾ ಶರ್ಮಾ ಅವರನ್ನು ಪ್ರಾಥಮಿಕ ದೂರಿನ ಅನ್ವಯ ಬಂಧಿಸಲಾಗಿದೆ ಎಂದು ಬುಧವಾರ ಸುಪ್ರೀಂ ಕೋರ್ಟ್ ಹೇಳಿದೆ.
ಕೋರ್ಟ್ ಜಾಮೀನು ನೀಡಿದರೂ ಆರೋಪಿಯನ್ನು ಜೈಲಿನಿಂದ ಬಿಡುಗಡೆ ಮಾಡಿಲ್ಲ ಎಂದು ಪ್ರಿಯಾಂಕಾ ಅವರ ಸಹೋದರ ಇಂದು ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು.
ಇದಕ್ಕೆ ಉತ್ತರಿಸಿದ ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲರು, ಇಂದು ಬೆಳಗ್ಗೆ 9.40ಕ್ಕೆ ಪ್ರಿಯಾಂಕಾ ಶರ್ಮಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಇಂದಿರಾ ಬ್ಯಾನರ್ಜಿ ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ಸಪ್ರೀಂ ಪೀಠಕ್ಕೆ ತಿಳಿಸಿದರು.
ಸಾಮಾನ್ಯವಾಗಿ ಎಲ್ಲಾ ಬಂಧನಗಳು ಪ್ರಾಥಮಿಕ ದೂರಿನ ಅನ್ವಯವೇ ನಡೆದಿರುತ್ತವೆ ಎಂದು ಅಭಿಪ್ರಾಯ ಪಟ್ಟ ಕೋರ್ಟ್, ತಕ್ಷಣ ಶರ್ಮಾ ಅವರನ್ನು ಬಿಡುಗಡೆ ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಎಂಇಟಿ ಗಾಲಾ - 2019' ಫ್ಯಾಷನ್ ಶೋನಲ್ಲಿ ಕಾಣಿಸಿಕೊಂಡ ರೀತಿಯಲ್ಲಿ ಮಮತಾ ಬ್ಯಾನರ್ಜಿ ಅವರ ಚಿತ್ರವನ್ನು ಎಡಿಟ್ ಮಾಡಿ, ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ಪ್ರಿಯಾಂಕಾ ಶರ್ಮಾ ಅವರನ್ನು ಬಂಧಿಸಲಾಗಿತ್ತು. ಆರೋಪಿಗೆ  ನಿನ್ನೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com