ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗೋಡ್ಸೆ ಪರ ಟ್ವೀಟ್‌: ಭುಗಿಲೆದ್ದ ಆಕ್ರೋಶ, ದೇಶಾದ್ಯಂತ ಖಂಡನೆ

ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಕೊಂದ ಗೋಡ್ಸೆ ದೇಶಭಕ್ತ ಎಂದು ಬಿಜೆಪಿ ನಾಯಕಿ ಸಾಧ್ವಿ ಪ್ರಗ್ಯಾ ಸಿಂಗ್ ಹೇಳಿಕೆ ನೀಡಿದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಹಲವು ನಾಯಕರು ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ಬೆಂಗಳೂರು: ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಕೊಂದ ಗೋಡ್ಸೆ ದೇಶಭಕ್ತ ಎಂದು ಬಿಜೆಪಿ ನಾಯಕಿ ಸಾಧ್ವಿ ಪ್ರಗ್ಯಾ ಸಿಂಗ್ ಹೇಳಿಕೆ ನೀಡಿದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಹಲವು ನಾಯಕರು ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ಹಿಂದೂ ಧರ್ಮದ ಮೊದಲ ಭಯೋತ್ಪಾದಕ ಎಂದು ಹೇಳುವ ಮೂಲಕ ನಟ ಕಮಲ್ ಹಾಸನ್ ವಿವಾದಕ್ಕೀಡಾಗಿದ್ದರು. ಅತ್ತ ಕಮಲ್ ಹಾಸನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಭೋಪಾಲ್ ಅಭ್ಯರ್ಥಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು, ಗೋಡ್ಸೆ ಅತ್ಯಂತ ದೊಡ್ಡ ದೇಶ ಪ್ರೇಮಿ ಎಂದು ಹೇಳಿ ವಿವಾದ್ಕಕೆ ಗ್ರಾಸವಾಗಿದ್ದರು. ಬಳಿಕ ಬಿಜೆಪಿ ನಾಯಕರಿಂದಲೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕ್ಷಮೆ ಕೇಳಿದರು. 
ಇತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಟ್ವೀಟ್‌ ಮಾಡಿ, ಸಂಘ ಪರಿವಾರದ ಸಿದ್ಧಾಂತಗಳಿಂದ ಗೋಡ್ಸೆ ಸ್ಫೂರ್ತಿ ಪಡೆದಿದ್ದ, ಸಾಧ್ವಿ ಪ್ರಗ್ಯಾ ಸಿಂಗ್ ಕೂಡ ಅದೇ ಸಿದ್ಧಾಂತದಿಂದ ಪ್ರೇರಣೆ ಪಡೆದವರು. ಗೋಡ್ಸೆ ಮೊದಲು ಗಾಂಧಿಯನ್ನು ಕೊಂದ, ನಂತರ ಮಹಾತ್ಮನ ಮಕ್ಕಳನ್ನೂ ಕೊಂದ. ಗೋಡ್ಸೆಯನ್ನು ದೇಶಭಕ್ತ ಎನ್ನುವ ಸಾಧ್ವಿ, ನರೇಂದ್ರ ಮೋದಿಯಿಂದ ಅನುಮೋದನೆ ಪಡೆದುಕೊಂಡಿದ್ದಾರೆ, ಇದು ಸಂಘ ಪರಿವಾರದ ದ್ವೇಷ ಸಿದ್ಧಾಂತವನ್ನು ವಿಸ್ತರಿಸುವ ಸೂಚನೆಯೇ.? ಎಂದು ಪ್ರಶ್ನಿಸಿದ್ದಾರೆ. \
ಈ ಮಧ್ಯೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ, ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಟ್ವೀಟ್‌ ಮಾಡಿದ್ದು, “ನಾಥೂರಾಮ್ ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000, ಈಗ ನೀವೇ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು?” ಎಂದು ಬಾಲಿಶವಾಗಿ ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಸಂಸದ ನಳಿನ್ ಕುಮಾರ್ ಕಟೀಲ್ ಬಹಿರಂಗವಾಗಿಯೇ ಸಾಧ್ವಿಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಈ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ. ಕಟೀಲ್ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕೆಲವರು "ಸಂಸದ ನಳಿನ್ ಕುಮಾರ್ ಕಟೀಲ್‌ಗಿಂತ ಶಂಕಿತ ಉಗ್ರೆ ಸಾಧ್ವಿಯೇ ಉತ್ತಮ" ಎಂದು ಪ್ರತಿಕ್ರಯಿಸಿದ್ದರೆ, ಮತ್ತೆ ಕೆಲವರು "ಗೋದ್ರಾ  ಹತ್ಯಾಕಾಂಡ ನಿಮಗೆ ನೆನಪಾಗಲಿಲ್ಲವೆ, ಗುಜರಾತ್ ನಲ್ಲಿ 1500 ಮುಸಲ್ಮಾನರು ಹಾಗೂ 500 ಹಿಂದೂಗಳ ಸಾವಿಗೆ ಕಾರಣ ಯಾರು?" ಎಂದು ಮರುಪ್ರಶ್ನೆ ಹಾಕಿದ್ದಾರೆ. "ದಿನಬೆಳಗಾದರೆ ದೇಶದ ಜನರನ್ನು ತನ್ನ ಸುಳ್ಳಿನ ಮೂಲಕ ಮಾನಸಿಕವಾಗಿ ಕೊಲ್ಲುತ್ತಿರುವ ಈ ನಿಮ್ಮ ಪ್ರಧಾನಿಯಲ್ಲವೇ ಸರ್ ದೇಶದ ದುರಂತ. ಸುಳ್ಳಿನ ಸರದಾರ" ಎಂದು ಕೆಲವರು ಜರಿದರೆ ಮತ್ತೆ ಕೆಲವರು, "ದೇಶದ 130 ಕೋಟಿ ಜನರನ್ನು ತನ್ನ ಸುಳ್ಳಿನ ಮೂಲಕ ಕೊಂದ ಮೋದಿಯೇ ನಿಜವಾದ ಕ್ರೂರಿ" ಎಂದು ಕಾಲೆಳೆದಿದ್ದಾರೆ.
ಇತ್ತ ತಮ್ಮ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆಯೇ ಎಚ್ಚೆತ್ತ ನಳೀನ್ ಕುಮಾರ್ ಕಟೀಲ್ ಕ್ಷಮೆ ಕೋರಿದ್ದು,  "ನನ್ನಿಂದ ನೋವಾಗಿದ್ದರೆ ಕ್ಷಮಿಸಿ, ಇಲ್ಲಿಗೆ ಈ ಚರ್ಚೆ ಮುಗಿಸೋಣ" ಎಂದು ಟ್ವೀಟ್ ಮಾಡಿದ್ದಾರೆ. 'ನನ್ನ  ಕೊನೆಯ ಎರಡು ಟ್ವೀಟ್ ಗಳಿಗೆ ಟೀಕೆ ವ್ಯಕ್ತವಾಗಿದ್ದನ್ನು ಗಮನಿಸಿದ್ದೇನೆ. ಯಾರಿಗಾದರೂ ಅದರಿಂದ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನೋವಾಗಿದೆಯೆಂದು ತಿಳಿದ ತಕ್ಷಣ ಟ್ವೀಟ್ ಹಿಂಪಡೆದಿದ್ದೇನೆ. ಚರ್ಚೆ ಇಲ್ಲಿಗೆ ಮುಗಿಸೋಣ' ಎಂದು ಟ್ವೀಟ್ ಮಾಡಿದ್ದಾರೆ.
ಈ ಮಧ್ಯೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಕೂಡ ಗೋಡ್ಸೆ ಪರವಿರೋಧ ಚರ್ಚೆಯಲ್ಲಿ ತೊಡಗಿಸಿಕೊಂಡು ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಏಳು ದಶಕಗಳ ಬಳಿಕ ನಾಥುರಾಮ್‌ ಗೋಡ್ಸೆಯ ಬಗ್ಗೆ ಚರ್ಚೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಗೋಡ್ಸೆ ಪರವಾಗಿ ಟ್ವೀಟ್ ಮಾಡಿದ್ದರು. ಅವರ ಈ ಟ್ವೀಟ್ ಗೆ ವ್ಯಾಪಕ ವಿರೋಧ ವ್ಯಕ್ತ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಅವರು, ತಮ್ಮ ಟ್ವಿಟರ್ ಖಾತೆ ಕಳೆದ ಒಂದು ವಾರದಿಂದ ಹ್ಯಾಕ್ ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಡಿ.ಕೆ.ಶಿವಕುಮಾರ್, ರಾಜೀವ್ ಗಾಂಧಿ ಅವರನ್ನು ಗೋಡ್ಸೆ, ಕಸಬ್‌ ಜೊಗೆ ಹೋಲಿಕೆ ಮಾಡಿರುವುದು ಅಪಾಯಕಾರಿ ಸಂಸ್ಕೃತಿ, ಸೋಲಿನ ಭಯದಿಂದ ಬಿಜೆಪಿಯವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com