ಬಿ. ಎಲ್.ಸಂತೋಷ್ ಅಂಡಮಾನ್ ಪ್ರವಾಸ: ಅಧಿಕಾರದಿಂದ ಯಡಿಯೂರಪ್ಪ ದೂರ ಇಡುವ ತಂತ್ರ?

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷಾ ವರದಿ ಪ್ರಕಟವಾದ ಬೆನ್ನಲ್ಲೇ ರಾಜ್ಯ ಬಿಜೆಪಿಯ ಪ್ರಮುಖ ನಾಯಕರು ಅಂಡಮಾನ್ ಮತ್ತು ನಿಕೋಬಾರ್

Published: 20th May 2019 12:00 PM  |   Last Updated: 20th May 2019 06:11 AM   |  A+A-


BL Santhosh-Yeddyurappa

ಬಿಎಲ್ ಸಂತೋಷ್-ಯಡಿಯೂರಪ್ಪ

Posted By : SBV SBV
Source : UNI
ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷಾ ವರದಿ ಪ್ರಕಟವಾದ ಬೆನ್ನಲ್ಲೇ ರಾಜ್ಯ ಬಿಜೆಪಿಯ ಪ್ರಮುಖ ನಾಯಕರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ರಹಸ್ಯ ಕಾರ್ಯಚರಣೆ ನಡೆಸಿರುವ ಹಲವು ಊಹಾಪೋಹ, ಚರ್ಚೆಗಳಿಗೆ ಕಾರಣವಾಗಿದೆ.

ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಪ್ರಮುಖ ನಾಯಕರು ದ್ವೀಪದಲ್ಲಿ ಬೀಡು ಬಿಟ್ಟಿದ್ದಾರೆ.

ಆರ್ ಎಸ್ಎಸ್ ಹಾಗೂ ಬಿಜೆಪಿ ಪ್ರಮುಖ ನಾಯಕ ಬಿ.ಎಲ್. ಸಂತೋಷ್, ಸಿ.ಟಿ.ರವಿ , ನಿರ್ಮಲ್ ಕುಮಾರ್ ಸುರಾನಾ, ಭಾನುಪ್ರಕಾಶ್ ಸೇರಿದಂತೆ ಎಲ್ಲಾ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ಅಂಡಮಾನ್‌ ನಿಕೋಬಾರ್ ಗೆ ತೆರಳಿದ್ದಾರೆ. ಅಲ್ಲಿ ಮುಂದಿನ ಚುನಾವಣಾ ಫಲಿತಾಂಶ, ಪಕ್ಷ ಸಂಘಟನೆ, ಹಾಗೂ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. 

ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ರಚನೆಗೆ ಆಪರೇಷನ್ ಕಮಲ ಕಾರ್ಯಾಚರಣೆ ತೀವ್ರಗೊಂಡಿರುವ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಹಾಗೂ ಸರ್ಕಾರ ರಚನೆಯಾದರೆ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರ ಇಡುವ ಬಗ್ಗೆಯೂ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ  ಸರ್ಕಾರ ರಚನೆಯಾದರೆ ರಾಜ್ಯದಲ್ಲೂ ಬಿಜೆಪಿ ಸರ್ಕಾರ ರಚನೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು. ಕಾಂಗ್ರೆಸ್ ಶಾಸಕರು ಬಿಜೆಪಿಯತ್ತ ವಾಲುವ ಸಾಧ್ಯತೆ ಇದ್ದು ಜಾಣ್ಮೆಯಿಂದ ಗೊಂದಲಗಳಿಲ್ಲದೆ ಸರ್ಕಾರ ರಚನೆ ಮಾಡುವ ತಂತ್ರಗಾರಿಕೆ ರೂಪಿಸಲಾಗಿದೆ ಎನ್ನಲಾಗಿದೆ.

ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆಯೂ ಚರ್ಚೆ ನಡೆಯತ್ತಿದ್ದು ಯಾರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಪಕ್ಷ ಹಾಗೂ ಸರ್ಕಾರ ರಚನೆಗೆ ಅನುಕೂಲ ಎಂಬ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಬಿ.ಎಲ್ ಸಂತೋಷ್ ಆರ್ ಎಸ್ಎಸ್ ಹಿನ್ನಲೆಯುಳ್ಳ ಹಾಗೂ ನಿಷ್ಟಾವಂತರನ್ನು ಆಯ್ಕೆ ಮಾಡುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿ.ಟಿ. ರವಿ , ಜಗದೀಶ್ ಶೆಟ್ಟರ್, ಪ್ರಹಾದ್ ಜೋಶಿ, ನಳಿನ್ ಕುಮಾರ್ ಕಟೀಲ್, ಸದಾನಂದಗೌಡ ಸೇರಿದಂತೆ ಉತ್ತರ ಕರ್ನಾಟಕದ ಭಾಗದ ಪ್ರಮುಖ ನಾಯಕರ ಹೆಸರು ಚರ್ಚೆಯಲ್ಲಿದೆ ಎನ್ನಲಾಗಿದೆ. 

ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಜೊತೆ ಸಂತೋಷ್ ಉತ್ತಮ ಬಾಂಧವ್ಯ ಹೊಂದಿದ್ದರು.ಕೆ.ಎಸ್.ಈಶ್ವರಪ್ಪ ಜೊತೆಯೂ ಉತ್ತಮ ಸಂಭಂಧ ಹೊಂದಿದ್ದರು ಆದರೆ ಈಶ್ವರಪ್ಪ ಅವರ ಅಹಿಂದ ನಡೆಯಿಂದ ಸಂತೋಷ್ ದೂರ ಸರಿದಿದ್ದಾರೆ ಎನ್ನಲಾಗಿದೆ. ಆರ್.ಆಶೋಕ್ ಬಿಬಿಎಂಪಿ ಅಧಿಕಾರ ಹಿಡಿಯುವಲ್ಲಿ ವಿಫಲರಾದ ಹಿನ್ನಲೆಯಲ್ಲಿ ಅವರಿಂದಲೂ  ಸಂತೋಷ್ ಅಂತರ ಕಾಯ್ದು ಕೊಂಡಿದ್ದಾರೆ.ಹೀಗಾಗಿ ಸಿ.ಟಿ.ರವಿ ಅಥವಾ ಕರಾವಳಿ ಬಾಗದ ನಾಯಕರನ್ನು ರಾಜ್ಯಾಧ್ಯಕ್ಷರನ್ನಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಪ್ರಯತ್ನ ನಡೆದಿದೆ ಎಂಬ ಮಾಹಿತಿ ಇದೆ.

ಮತ್ತೊಂದೆಡೆ ಇಂದು ನಿನ್ನೆ ರಾತ್ರಿಯಿಂದ ಬಿಜೆಪಿ ಕಚೇರಿಯಲ್ಲಿ ರುದ್ರಹೋಮ , ಗಣಹೋಮ ಹಮ್ಮಿಕೊಂಡಿದ್ದು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಪೂಜೆಯಲ್ಲಿ ಭಾಗವಹಿಸಿ ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಿದರು.ಶಾಸಕರಾದ ಅಶ್ವಥ್ ನಾರಾಯಣ್,ರವಿ ಕುಮಾರ್,ರೇವೂರ್ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ತಮಿಳುನಾಡು , ಕೇರಳ ರಾಜ್ಯಗಳ ಚುನಾವಣಾ ವಿಶ್ಲೇಷಣೆಗಾಗಿ ಬಿ.ಎಲ್ ಸಂತೋಷ್ ಅವರು ಅಂಡಮಾನ್ ನಲ್ಲಿ ವಿಶೇಷ ಬೈಟೆಕ್ ಕರೆದಿದ್ದಾರೆ. ಕರ್ನಾಟಕದ ಹೊರಗೆ ಚುನಾವಣಾ ಕಾರ್ಯಗಳಲ್ಲಿ ಭಾಗಿಯಾಗಿದ್ದ ಬಿಜೆಪಿ ಪ್ರಮುಖರು ಬೈಠಕ್ ನಲ್ಲಿ ಭಾಗಿಯಾಗಿದ್ದಾರೆ.  ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೂ ಬೈಠಕ್ ಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಇಷ್ಟು ದಿನ ಬೇರೆ ಬೇರೆ ರಾಜ್ಯದಲ್ಲಿ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಪಕ್ಷದ ನಾಯಕರು ಅಲ್ಲಿ ಸಭೆ ಸೇರಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಮೇ.23 ರ ನಂತರ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಅದಕ್ಕಿಂತ ದೊಡ್ಡ ರಾಜಕೀಯ ಬದಲಾವಣೆ ಮತ್ತೇನು ಬೇಕು? ಎಂದು ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp