ಬೆಚ್ಚಿ ಬಿದ್ದ ರಾಷ್ಟ್ರ ರಾಜಧಾನಿ! ಟಿಕ್ ಟಾಕ್ ಸ್ಟಾರ್ ಮೇಲೆ ಅಪರಿಚಿತರಿಂದ ಗುಂಡಿನ ಸುರಿಮಳೆಗೈದು ಹತ್ಯೆ

ಟಿಕ್ ಟಾಕ್ ವಿಡಿಯೋ ಅಪ್ಲಿಕೇಷನ್ ಮೂಲಕ ಮನೆಮಾತಾಗಿದ್ದ 27 ವರ್ಷದ ಜಿಮ್ ತರಬೇತುದಾರ ಮೋಹಿತ್‌ ಮೋರ್ ಎಂಬಾತನ ಮೇಲೆ ದುಷ್ಕರ್ಮಿಗಳು ಗುಂಡಿನ ಸುರಿಮಳೆಗೈದು ಹತ್ಯೆ ಮಾಡಿದ್ದಾರೆ.

Published: 22nd May 2019 12:00 PM  |   Last Updated: 22nd May 2019 11:29 AM   |  A+A-


Mohith Mor

ಮೋಹಿತ್‌ ಮೋರ್

Posted By : RHN RHN
Source : Online Desk
ನವದೆಹಲಿ: ಟಿಕ್ ಟಾಕ್ ವಿಡಿಯೋ ಅಪ್ಲಿಕೇಷನ್ ಮೂಲಕ ಮನೆಮಾತಾಗಿದ್ದ 27 ವರ್ಷದ ಜಿಮ್ ತರಬೇತುದಾರ ಮೋಹಿತ್‌ ಮೋರ್ ಎಂಬಾತನ ಮೇಲೆ ದುಷ್ಕರ್ಮಿಗಳು ಗುಂಡಿನ ಸುರಿಮಳೆಗೈದು ಹತ್ಯೆ ಮಾಡಿದ್ದಾರೆ.

ದೆಹಲಿಯ ನಜಾಫ್ ಗಡದಲ್ಲಿ ನಡೆದ ಪ್ರಕರಣದಲ್ಲಿ ಮೂವರು ದುಷ್ಕರ್ಮಿಗಳು ಮೋಹಿತ್‌ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. 

ಭಾನುವಾರವಷ್ಟೇ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ಎರಡು ಗ್ಯಾಂಗ್ ವಾರ್ ಗಳ ನಂತರ ಈ ಹತ್ಯೆ ನಡೆದಿದೆ.

ಹರಿಯಾಣದ ಬಹದ್ದೂರ್ ಗಡದವರಾದ ಮೋಹಿತ್ ದೆಹಲಿಯ ನಜಾಫ್ ಗಡದಲ್ಲಿ ವಾಸ್ತವ್ಯವಿದ್ದರು. ಅವರು ಜನಪ್ರಿಯ ವೀಡಿಯೋ ಎಡಿಟಿಂಗ್ ಅಪ್ಲಿಕೇಷನ್ ಟಿಕ್ ಟಾಕ್ ಮೂಲಕ ಬಹಳ ಜನಮೆಚ್ಚುಗೆ ಗಳಿಸಿದ್ದರು. ಅವರಿಗೆ 5.17 ಲಕ್ಷಕ್ಕೆ ಹೆಚ್ಚು ಅಭಿಮಾನಿಗಳಿದ್ದರು.

ದಾಳಿಯ ವೇಳೆ ಮೋಹಿತ್‌ ತಮ್ಮ ಮನೆ ಸಮೀಪದ ಝೆರಾಕ್ಸ್ ಅಂಗಡಿಯಲ್ಲಿ ತನ್ನ ಸ್ನೇಹಿತನನ್ನು ಭೇಟಿಯಾಗಲು ತೆರಳಿದ್ದರು. ಅಲ್ಲಿ ಕುಳಿತಿರುವಾಗಲೇ ಮೂವರು ಶಂಕಿತರು ಆಗಮಿಸಿ ಮೋಹಿತ್ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಒಟ್ಟು ಹದಿಮೂರು ಸುತ್ತು ಗುಂಡು ಹಾರಿಸಿದ್ದು ಇದರಲ್ಲಿ  ಏಳು ಗುಂಡು ತಗುಲಿದ ಪರಿಣಾಮ ಮೋಹಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಭಾನುವಾರದ ಎರಡು ಗ್ಯಾಂಗ್ ವಾರ್ ಗಳಿಗೆ ಹಾಗೂ ಮೋಹಿತ್ ಗೆ ಏನಾದರೂ ಸಂಬಂಧವಿದೆ ಎನ್ನುವುದನ್ನು ಇನ್ನಷ್ಟೇ ಪತ್ತೆ ಮಾಡಬೇಕಿದೆ. ಇದುವರೆಗಿನ ತನಿಖೆಯಲ್ಲಿ ಇಂತಹಾ ಯಾವ ಕುರುಹು ಪತ್ತೆಯಾಗಿಲ್ಲ. ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದೇವೆ. ದುಷ್ಕರ್ಮಿಗಳ ಪತ್ತೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಪೋಲೀಸ್ ತನಿಖಾಧಿಕಾರಿಗಳು ಹೇಳಿದ್ದಾರೆ.

ಮೂವರು ಆರೋಪಿಗಳು ತಲೆಗೆ ಹೆಲ್ಮೆಟ್ ಧರಿಸಿ ಸ್ಕೂಟಿ ಏರಿ ಬಂದಿದ್ದರು. ಕೃತ್ಯದ ನಂತರ ಅವರು ರಸ್ತೆಯಿಂದ ದೂರ ಸರಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗೊದೆ."ನಾವು ಅವರ ಟಿಕ್ ಟಾಕ್ ಮತ್ತು ಇನ್ಸ್ಟಾಗ್ರ್ಯಾಮ್ ಖಾತೆಗಳ ಕಾಮೆಂಟ್ ಗಳನ್ನು ಪರಿಶೀಲಿಸುತ್ತೇವೆ.. ಸಾಮಾಜಿಕ ಮಾಧ್ಯಮದಲ್ಲಿ ಯಾರೊಂದಿಗಾದರೂ  ಇವರು ವೈರತ್ವ ಇರಿಸಿಕೊಂಡಿದ್ದರೆ ಎಂಬುದನ್ನು ನೋಡಬೇಕಿದೆ. ಎಂದು ಅವರು ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp