ಶಾರದಾ ಚಿಟ್ ಫಂಡ್ ಹಗರಣ: ವಿಚಾರಣೆಗೆ ಹಾಜರಾಗುವಂತೆ ರಾಜೀವ್ ಕುಮಾರ್ ಸಿಬಿಐ ಸಮನ್ಸ್

ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಸೋಮವಾರ...
ರಾಜೀವ್ ಕುಮಾರ್
ರಾಜೀವ್ ಕುಮಾರ್
ಕೋಲ್ಕತಾ: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ಜಾರಿ ಮಾಡಿದೆ.
1989ರ ಬ್ಯಾಚ್ ನ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ನಂಬುಗೆಯ ಆಪ್ತ ಅಧಿಕಾರಿಯಾಗಿದ್ದು, ನಾಳೆ ಕೋಲ್ಕತಾದ ಸಿಬಿಐ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜೀವ್ ಕುಮಾರ್ ಅವರು ದೇಶಬಿಟ್ಟು ಹೋಗುವುದನ್ನು ತಡೆಯುವುದಕ್ಕಾಗಿ ಅವರ ವಿರುದ್ಧ ಸಿಬಿಐ ಲುಕ್​ ಔಟ್​ ನೋಟಿಸ್ ಸಹ​ ನೀಡಿದೆ ಎಂದು ಅವರು ಹೇಳಿದ್ದಾರೆ.
ಶಾರದಾ ಚಿಟ್​ ಫಂಡ್​ ಹಗರಣದ ಸಂಬಂಧ ಸಿಬಿಐ ಅಧಿಕಾರಿಗಳು ಲುಕ್​ ಔಟ್​ ನೋಟಿಸ್​ ನೀಡಿದ್ದಾರೆ. ಜೊತೆಗೆ ದೇಶದ ವಿವಿಧ ವಿಮಾನ ನಿಲ್ದಾಣದ ಅಧಿಕಾರಿಗಳಿಗೂ ನೋಟಿಸ್ ನೀಡಿದ್ದು, ರಾಜೀವ್ ಕುಮಾರ್ ವಿದೇಶಕ್ಕೆ ತೆರಳಬಾರದು. ಒಂದು ವೇಳೆ ಅವರು ಅಂತಹ ಪ್ರಯತ್ನ ಮಾಡಿದರೆ ಕೂಡಲೆ ನಮ್ಮ ಗಮನಕ್ಕೆ ತನ್ನಿ ಎಂದು ಸಿಬಿಐ ಅಧಿಕಾರಿಗಳು ನೋಟಿಸ್​ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಶಾರದಾ ಚಿಟ್ ಫಂಡ್ ಹಗರಣವನ್ನು ಸಿಬಿಐಗೆ ಒಪ್ಪಿಸುವ ಮುನ್ನ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದ ರಾಜೀವ್ ಕುಮಾರ್ ಅವರನ್ನು ಸಿಬಿಐ ವಶಕ್ಕೆ ಪಡೆದು ವಿಚಾರಣೆ ನಡೆಸಲು ಬಯಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹುಕೋಟಿ ಶಾರದಾ ಚಿಟ್‌ಫಂಡ್‌ ಹಗರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಹಿರಿಯ ಐಪಿಎಸ್‌ ಅಧಿಕಾರಿ ರಾಜೀವ್‌ ಕುಮಾರ್‌ ಅವರು ತಮ್ಮನ್ನು ಬಂಧಿಸದಂತೆ ಸುಪ್ರೀಂ ನೀಡಿದ್ದ 'ರಕ್ಷಣಾ ಅವಧಿ' ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿತ್ತು. ಹೀಗಾಗಿ ಯಾವುದೇ ಕ್ಷಣದಲ್ಲಿ ಸಿಬಿಐ ಅವರನ್ನು ಬಂಧಿಸುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com