ಶೌಚಾಲಯ ನಿರ್ಮಾಣಕ್ಕೆ ಹಣ ಸಿಗಲಿಲ್ಲ ಎಂದು ನೊಂದು ವಿಷ ಸೇವಿಸಿದ ಜಾರ್ಖಂಡ್ ಮಹಿಳೆ!

ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ಹಣ ಸಿಗಲಿಲ್ಲ ಎಂದು ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ರಾಂಚಿ: ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ಹಣ ಸಿಗಲಿಲ್ಲ ಎಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಜಾರ್ಖಂಡ್ ನ ದಿಯೋಘರ್ ನಲ್ಲಿ ನಡೆದಿದೆ.
ಮಿಟಾ ದೇವಿ ಮತ್ತು ಆಕೆಯ ಪತಿ ಸುರ್ಜಾ ಚಂದ್ ಕಳೆದ ವರ್ಷದಿಂದ ಶೌಚಾಲಯ ನಿರ್ಮಾಣಕ್ಕೆ ಹಣಕ್ಕಾಗಿ ಸರ್ಕಾರಿ ಕಚೇರಿಗೆ ಅಲೆಯುತ್ತಿದ್ದು ಕೊನೆಗೂ ಪ್ರಯೋಜನವಾಗದಿದ್ದಾಗ ಕಳೆದ ಭಾನುವಾರ ಬೇಸತ್ತು ಮಿಟಾ ದೇವಿ ವಿಷ ಸೇವಿಸಿದ್ದಾರೆ.
ವಿಷ ಸೇವಿಸಿರುವುದು ಗೊತ್ತಾದ ಕೂಡಲೇ ಮಿಟಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಆಕೆ ಅಪಾಯದಿಂದ ಪಾರಾಗಿದ್ದಾರೆ.
ಮಿಟಾ ಅವರ ಪತಿ ಪತ್ರಿಕೆ ವಿತರಕನಾಗಿ ಕೆಲಸ ಮಾಡುತ್ತಿದ್ದು, ಅತ್ತೆ ಮನೆಗೆಲಸಕ್ಕೆ ಹೋಗುತ್ತಿದ್ದಾರೆ. ಕಳೆದ 25 ವರ್ಷಗಳಿಂದ ಮಿಟಾ ಕುಟುಂಬ ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದು ಇಲ್ಲಿಯವರೆಗೆ ಬಹಿರ್ದೆಸೆಯನ್ನೇ ನಂಬಿಕೊಂಡಿದ್ದರು. ಹಣಕಾಸು ಪರಿಸ್ಥಿತಿ ಉತ್ತಮವಿಲ್ಲದ ಕಾರಣ ವಾರ್ಡ್ ಕೌನ್ಸಿಲರ್ ಗೆ ಅರ್ಜಿ ಸಲ್ಲಿಸಿದ್ದರು, ದಿಯೋಘರ್ ಮುನ್ಸಿಪಲ್ ಕಾರ್ಪೊರೇಷನ್(ಡಿಎಂಸಿ) ಕದವನ್ನು ಸಹ ತಟ್ಟಿದ್ದರು, ಆದರೆ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸುರ್ಜಾ.
ಮುನ್ಸಿಪಲ್ ಕಾರ್ಪೊರೇಷನ್ ನಿರ್ಲಕ್ಷ್ಯದಿಂದ ನಮಗೆ ಶೌಚಾಲಯ ಸಿಕ್ಕಿಲ್ಲ ಎನ್ನುತ್ತಾರೆ ಸುರ್ಜಾ, ಅಚ್ಚರಿಯೆಂದರೆ ಜಿಲ್ಲಾಡಳಿತ ಕಳೆದ ವರ್ಷ ಈ ಜಿಲ್ಲೆಯನ್ನು ಬಯಲುಶೌಚ ಮುಕ್ತ ಜಿಲ್ಲೆ ಎಂದು ಘೋಷಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com