
ಸಂಗ್ರಹ ಚಿತ್ರ
Source : UNI
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಉಂಟಾಗಿರುವ ಹೀನಾಯ ಸೋಲಿನಿಂದ ತೀವ್ರ ಮನನೊಂದಿರುವ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ವಾಪಸ್ಸು ಪಡೆಯುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಹೀಗಾಗಿ ರಾಹುಲ್ ಗಾಂಧಿ ಅವರ ಮನವೊಲಿಸಲು ಪಕ್ಷದ ಹಿರಿಯ, ಕಿರಿಯ ನಾಯಕರು ಮಂಗಳವಾರವೂ ಪ್ರಯತ್ನ ಮುಂದುವರಿಸಿದ್ದಾರೆ. ಈ ಸಂಬಂಧ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ವಾದ್ರಾ ಮತ್ತು ಸಿಚನ್ ಪೈಲಟ್ ಸೇರಿದಂತೆ ಹಲವು ನಾಯಕರು ರಾಹುಲ್ ಗಾಂಧಿ ದೆಹಲಿ ನಿವಾಸಕ್ಕೆ ತೆರಳಿ ರಾಹುಲ್ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ರಾಹುಲ್ ಗಾಂಧಿ ಅವರ ನಿವಾಸಕ್ಕೆ ಸಹೋದರಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ, ಪಕ್ಷದ ವಕ್ತಾರ ರಣದೀಪ್ ಸರ್ಜೆವಾಲ, ರಾಜಸ್ಥಾನ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಇಂದು ಬೆಳಗ್ಗೆ ಆಗಮಿಸಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.
ಮೊನ್ನೆ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಪಕ್ಷ ಕಳಪೆ ಸಾಧನೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರು ತಮ್ಮ ಮಕ್ಕಳಿಗೆ ಟಿಕೆಟ್ ಬೇಕು ಎಂದು ಬೇಡಿಕೆ ಇರಿಸಿ ಪಡೆದುಕೊಂಡಿದ್ದರು. ನಾಯಕರ ಮಕ್ಕಳಿಗೆ ಟಿಕೆಟ್ ನೀಡಲು ನನಗೆ ಇಷ್ಟವಿರಲಿಲ್ಲ. ಅದೇ ರೀತಿ ತಮಿಳುನಾಡಿನಲ್ಲಿ ಕೇಂದ್ರ ದ ಮಾಜಿ ಸಚಿವ ಪಿ. ಚಿದಂಬರಂ ಪಕ್ಷಕ್ಕಿಂತ ತಮ್ಮ ಪುತ್ರ ಕಾರ್ತಿ ಚಿದಂಬರಂ ಹಿತಾಸಕ್ತಿಯೇ ಮುಖ್ಯವಾಯಿತು ಎಂದು ರಾಹುಲ್ ಬೇಸರ ವ್ಯಕ್ತ ಪಡಿಸಿದ್ದರು ಎನ್ನಲಾಗಿದೆ.
ಭಾಷಣ ಮಾಡುವಾಗ ಉದ್ವೇಗಗೊಂಡಂತೆ ಕಂಡುಬಂದ ರಾಹುಲ್, ಪ್ರಚಾರದ ವೇಳೆ ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧ ನಾನು ಪ್ರಸ್ತಾಪಿಸಿದ ವಿಚಾರಗಳನ್ನು ಯಾರೊಬ್ಬರೂ ಮುಂದುವರಿಸಿಕೊಂಡು ಹೋಗಲಿಲ್ಲ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
Stay up to date on all the latest ರಾಷ್ಟ್ರೀಯ news